ಗೂಗಲ್ ಬೃಹತ್ ಹೂಡಿಕೆ: ವಿಶಾಖಪಟ್ಟಣದಲ್ಲಿ ಏಷ್ಯಾದ ಅತಿದೊಡ್ಡ ಡಾಟಾ ಸೆಂಟರ್ ನಿರ್ಮಾಣ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಅವರ ಅತಿರೇಕದ ಮಾತಿನ ವರಸೆಗಳ ಮಧ್ಯೆ ಅಮೆರಿಕ ಮೂಲದ ಜಾಗತಿಕ ಟೆಕ್ನಾಲಜಿ ದೈತ್ಯ ಗೂಗಲ್ ಸಂಸ್ಥೆ ಭಾರತದಲ್ಲಿ ಬೃಹತ್ ಡಾಟಾ ಸೆಂಟರ್ ನಿರ್ಮಿಸಲು ಹೊರಟಿದೆ. ಆಂಧ್ರದ ವಿಶಾಖಪಟ್ಟಣಂನಲ್ಲಿ ಆರು ಬಿಲಿಯನ್ ಡಾಲರ್ (ಸುಮಾರು 52,000 ಕೋಟಿ ರೂ) ಹೂಡಿಕೆಯಲ್ಲಿ ಗೂಗಲ್ 1 ಜಿಡಬ್ಲ್ಯು ಡಾಟಾ ಸೆಂಟರ್ ಅನ್ನು ನಿರ್ಮಿಸುವ ಯೋಜನೆ ಹೊಂದಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗೂಗಲ್ನ ಈ ಡಾಟಾ ಸೆಂಟರ್ ಏಷ್ಯಾದಲ್ಲೇ ಅತಿದೊಡ್ಡದೆನಿಸಲಿದೆ. ಸಿಂಗಾಪುರ, ಮಲೇಷ್ಯಾ, ಥಾಯ್ಲೆಂಡ್ ಮೊದಲಾದ ದೇಶಗಳಲ್ಲಿ ಗೂಗಲ್ ಡಾಟಾಸೆಂಟರ್ ಸ್ಥಾಪಿಸುತ್ತಿದೆ. ಅಲ್ಲಿರುವುದಕ್ಕಿಂತಲೂ ದೊಡ್ಡದೆನಿಸಿದ ಡಾಟಾಸೆಂಟರ್ ಅನ್ನು ವಿಶಾಖಪಟ್ಟಣಂನಲ್ಲಿ ನಿರ್ಮಿಸುವ ಉದ್ದೇಶ ಇದೆ. ಈ ಬೃಹತ್ ಯೋಜನೆಯಲ್ಲಿ 2 ಬಿಲಿಯನ್ ಡಾಲರ್ ವೆಚ್ಚದ ನವೀಕರಣ ಇಂಧನ ಅಭಿವೃದ್ಧಿಯೂ ಒಳಗೊಂಡಿದೆ. ಇಲ್ಲಿ ತಯಾರಾಗುವ ವಿದ್ಯುತ್ ಅನ್ನು ಡಾಟಾಸೆಂಟರ್ನ ಅಗತ್ಯಗಳಿಗೆ ಪೂರೈಸಲು ಸಾಕಾಗುತ್ತದೆ.
ಆಂಧ್ರದಲ್ಲಿ 6 ಗಿಗಾವ್ಯಾಟ್ ಡಾಟಾ ಸೆಂಟರ್?
ಆಂಧ್ರದಲ್ಲಿ ಗೂಗಲ್ 1 ಗಿಗಾ ವ್ಯಾಟ್ ಡಾಟಾ ಸೆಂಟರ್ ನಿರ್ಮಿಸುತ್ತಿದೆ. ಇತರ ಸಂಸ್ಥೆಗಳಿಂದಲೂ ಆಂಧ್ರದಲ್ಲಿ ಡಾಟಾ ಸೆಂಟರ್ಗಳು ನಿರ್ಮಾಣವಾಗಲಿವೆ. ಆಂದ್ರದ ಐಟಿ ಸಚಿವ ನಾರ ಲೋಕೇಶ್ ಪ್ರಕಾರ, ಈಗಾಗಲೇ 1.6 ಗಿಗಾವ್ಯಾಟ್ಗಳ ಡಾಟಾ ಸೆಂಟರ್ಗಳ ಸ್ಥಾಪನೆಗೆ ಹೂಡಿಕೆಗಳನ್ನು ಅಂತಿಮಗೊಳಿಸಲಾಗಿದೆ. ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ 6 ಗಿಗಾವ್ಯಾಟ್ನ ಡಾಟಾಸೆಂಟರ್ಗಳನ್ನು ನಿರ್ಮಿಸುವ ಗುರಿ ಎಂದು ಸಚಿವರು ಹೇಳಿದ್ದಾರೆ.
ಆಂಧ್ರದಲ್ಲಿ ಮುಂಬೈಗಿಂತ ಎರಡು ಪಟ್ಟು ದೊಡ್ಡ ಕೇಬಲ್ ನೆಟ್ವರ್ಕ್?
ಆಂಧ್ರ ಸರ್ಕಾರವು ತನ್ನ ರಾಜ್ಯದಲ್ಲಿ ಡಿಜಿಟಲ್ ಮೂಲಸೌಕರ್ಯ ವಿಸ್ತರಿಸುತ್ತಿದೆ. ವಿಶಾಖಪಟ್ಟಣನಲ್ಲಿ ಮೂರು ಹೊಸ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯವಹಿಸಲಾಗುತ್ತಿದೆ ಎಂದು ಸಚಿವ ನಾರ ಲೋಕೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಶೇ.25 ರಷ್ಟು ಸುಂಕ ಬೆನ್ನಲ್ಲೇ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ
ಈ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ಗಳು ಜಾಗತಿಕ ನೆಟ್ವರ್ಕ್ಗಳಿಗೆ ಬಹಳ ವೇಗದ ಮತ್ತು ಸಮರ್ಪಕ ಕನೆಕ್ಷನ್ಗಳನ್ನು ನೀಡಲು ಉಪಯುಕ್ತ ಎನಿಸುತ್ತವೆ ಎನ್ನಲಾಗಿದೆ. ಸಚಿವ ನಾರಾ ಲೋಕೇಶ್ ಪ್ರಕಾರ, ಮುಂಬೈನಲ್ಲಿ ಈಗ ಇರುವುದಕ್ಕಿಂತ ಎರಡು ಪಟ್ಟು ದೊಡ್ಡದಾದ ಕೇಬಲ್ ನೆಟ್ವರ್ಕ್ ನಿರ್ಮಿಸಲು ಸಾಧ್ಯವಾಗುತ್ತದೆ.
