ಗೂಗಲ್ ಸಿಇಒ ಸುಂದರ್ ಪಿಚೈ ಸರಳತೆಗೆ ಮತ್ತೊಂದು ನಿದರ್ಶನ: ಬೆಂಗಳೂರಿನ ಟೆಕ್ಕಿಯ ಪುತ್ರನ ಆರೋಗ್ಯ ವಿಚಾರಿಸಿ ಎಲ್ಲರ ಮನಗೆದ್ದರು

ಬೆಂಗಳೂರು: ಗೂಗಲ್ ಸಿಇಒ ಸುಂದರ್ ಪಿಚೈ ಜವಾಬ್ದಾರಿ ಅತ್ಯಂತ ಮಹತ್ವದ್ದು. ಇನ್ನು ಕೋಟಿ ಕೋಟಿ ರೂಪಾಯಿಗಳಲ್ಲಿ ಪಿಚೈ ವೇತನ ಪಡೆಯುತ್ತಿದ್ದಾರೆ. ಶ್ರೀಮಂತರ ಪಟ್ಟಿಯಲ್ಲೂ ಸುಂದರ್ ಪಿಚೈ ಸ್ಥಾನ ಪಡೆದಿದ್ದಾರೆ. ಆದರೆ ಪಿಚೈ ಅತ್ಯಂತ ಸರಳ ವ್ಯಕ್ತಿ. ತಮ್ಮ ನಡೆ, ಮಾತು ಎಲ್ಲವೂ ಸರಳ. ಇದೀಗ ಬೆಂಗಳೂರಿನ ಸಾಮಾನ್ಯ ಟೆಕ್ಕಿಗೆ ಪ್ರತಿಕ್ರಿಯೆ ನೀಡುವ ಮೂಲಕ ಮತ್ತೆ ಎಲ್ಲರ ಮನ ಗೆದ್ದಿದ್ದಾರೆ. ಬೆಂಗಳೂರಿನ ಟೆಕ್ಕಿಯ ಮಗ ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಕಚೇರಿಯಿಂದ ನೇರವಾಗಿ ಆಸ್ಪತ್ರೆಗೆ ದೌಡಾಯಿಸಿದ ಟೆಕ್ಕಿ ಮಗನ ಜೊತೆ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು. ನಿಧಾನವಾಗಿ ಮಗ ಚೇತರಿಸಿಕೊಳ್ಳುತ್ತಿದ್ದಂತೆ ಖುಷಿಯಿಂದ ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಈ ಟ್ವೀಟ್‌ಗೆ ಸುಂದರ್ ಪಿಚೈ ಹೃದಯಸ್ವರ್ಶಿ ಪ್ರತಿಕ್ರಿಯೆ ನೀಡಿ ಎಲ್ಲರ ಗಮನಸೆಳೆದಿದ್ದಾರೆ.

ಬೆಂಗಳೂರು ಟೆಕ್ಕಿಯ ಮಗನಿಗೆ ಗಂಭೀರ ಗಾಯ, ಆಸ್ಪತ್ರೆ ದಾಖಲು
ಬೆಂಗಳೂರು ಮೂಲದ ಟೆಕ್ಕಿ ಆಶುತೋಶ್ ಶ್ರೀವಾತ್ಸವ್ ಎಂದಿನಂತೆ ಬೆಳಗ್ಗೆ ಕಚೇರಿಗೆ ತೆರಳಿದ್ದರು. ಮನೆಯಿಂದ ತುರ್ತು ಕರೆಯೊಂದು ಬಂದಿದೆ. ಮಗ ಮಹಡಿಯಿಂದ ಬಿದ್ದು ತಲೆಗೆ ಗಂಭೀರವಾಗಿ ಗಾಯವಾಗಿದೆ. ಹೀಗಾಗಿ ಆಸ್ಪತ್ರೆ ತುರ್ತು ನಿಘಾ ಘಟಕದಲ್ಲಿ ದಾಖಲು ಮಾಡಿರುವುದಾಗಿ ಹೇಳಿದ್ದಾರೆ. ಈ ಆಘಾತಕಾರಿ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಆಶುತೋಶ್ ಶ್ರೀವಾತ್ಸವ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗನ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.
ಘಟನೆ ಕುರಿತು ಟ್ವೀಟ್ ಮಾಡಿದ ಆಶುತೋಷ್, ಕಚೇರಿಯಿಂದ ನೇರವಾಗಿ ಆಸ್ಪತ್ರೆಗೆ ಆಗಮಿಸಿದ್ದೇನೆ. ಮಹಡಿಯಿಂದ ಬಿದ್ದ ಮಗನ ತಲೆಗೆ ತೀವ್ರವಾದ ಗಾಯವಾಗಿದೆ. ಹೀಗಾಗಿ ಮಗನ ತಲೆಗೆ ಸರ್ಜರಿ ಮಾಡಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ. ತನ್ನ ಪ್ರಾರ್ಥನೆ ಜೊತೆಗೆ ಎಲ್ಲರ ಪ್ರಾರ್ಥನೆ ಇರಲಿ ಎಂದು ಆಶುತೋಷ್ ಈ ಟ್ವೀಟ್ ಮಾಡಿದ್ದರು. ಹಲವರು ಪ್ರತಿಕ್ರಿಯೆ ನೀಡಿದ್ದರು. ಶೀಘ್ರದಲ್ಲೇ ಗುಣಮುಖವಾಗಲಿ ಎಂದಿದ್ದರು.
ಮಗನ ಚೇತರಿಕೆ ಟ್ವೀಟ್ ಮಾಡಿದ್ದ ಆಶುತೋಷ್
ಮಗ ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭಿಸಿದ್ದ. ಈ ಖುಷಿಯಿಂದ ಆಶುತೋಷ್ ಟ್ವೀಟ್ ಮಾಡಿದ್ದರು. ನಿಮ್ಮಲ್ಲರ ಹಾರೈಕೆ, ಪ್ರಾರ್ಥನೆಯಿಂದ ನನ್ನ ಮಗ ಚೇತರಿಸಿಕೊಳ್ಳುತ್ತಿದ್ದಾನೆ. ನನ್ನ ಮಗ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾನೆ. ನಿಜಕ್ಕೂ ನಿಮ್ಮೆಲ್ಲರ ಪ್ರೀತಿ ಹಾಗೂ ಪ್ರಾರ್ಥನೆಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದರು.
ಪ್ರತಿಕ್ರಿಯೆ ನೀಡಿದ ಸುಂದರ್ ಪಿಚೈ
ಆಶುತೋಷ್ ತನ್ನ ಮಗ ಚೇತರಿಸಿಕೊಳ್ಳುತ್ತಿದ್ದಾನೆ, ಇಂದೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾನೆ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಗೂಗಲ್ ಸಿಇಒ ಸುಂದರ್ ಪಿಚೈ ಪ್ರತಿಕ್ರಿಯೆ ನೀಡಿದ್ದಾರೆ. ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕೇಳಿ ಸಂತೋಷವಾಯಿತು ಎಂದು ಪಿಚೈ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ರಿಪ್ಲೈ ಮೂಲಕ ಆಶುತೋಶ್, ಧನ್ಯವಾದಗಳು, ಆತ ಧೈರ್ಯದ ಹುಡುಗ ಎಂದಿದ್ದಾರೆ.
