ಪೊಲೀಸ್ ದಂಪತಿಗೆ ಗುಡ್‌ನ್ಯೂಸ್: ರಾಜ್ಯ ಸರ್ಕಾರದಿಂದ ಅಂತರ್ಜಿಲ್ಲಾ ವರ್ಗಾವಣೆಗೆ ಅವಕಾಶ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ (Police Department) ಕೆಲಸ ಮಾಡುತ್ತಿರುವ ಗಂಡ-ಹೆಂಡತಿಗೆ ರಾಜ್ಯ ಸರ್ಕಾರ (Karnataka Government) ಭರ್ಜರಿ ಸುದ್ದಿ (Good News) ಕೊಟ್ಟಿದ್ದು, ಅಂತರ್ಜಿಲ್ಲಾ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ

7 ವರ್ಷ ಸೇವಾವಧಿ ಪೂರ್ಣವಾಗಿದ್ದರೆ ಅವಕಾಶ
ಹೌದು, ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಅದರಲ್ಲೂ ಪತಿ-ಪತ್ನಿಗೆ ಸರ್ಕಾರ ಈ ಗುಡ್‌ನ್ಯೂಸ್ ಕೊಟ್ಟಿದ್ದು, ಏಳು ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಮಾಡಿರುವ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್ ದರ್ಜೆಯ ಎಲ್ಲಾ ಅಧಿಕಾರಿಗಳಿಗೆ ಅಂತರ್ಜಿಲ್ಲಾ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದೆ. ಅದರಲ್ಲೂ ಮುಖ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಗಂಡ-ಹೆಂಡತಿ ಇಬ್ಬರು ಕೆಲಸ ಮಾಡುತ್ತಿದ್ದರೆ, ಅವರ ವರ್ಗಾವಣೆಯನ್ನ ಕಡ್ಡಾಯ ಎಂದು ಪರಿಗಣಿಸಲಾಗುತ್ತದೆ ಹಾಗೂ ಅವರು ಕೇಳಿದ ಜಿಲ್ಲೆಗಳಿಗೆ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದೆ.
ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ. ಎ. ಸಲೀಂ ಅಹಮದ್ ಅವರಿಗೆ ಲಿಖಿತವಾಗಿ ಸೂಚನೆ ಕೊಟ್ಟಿದ್ದು, ಈ ಆದೇಶವು ಈ ತಿಂಗಳಿನಿಂದಲೇ ಜಾರಿಗೆ ಬರಲಿದೆ. ಇದು ಪೊಲೀಸ್ ಸಿಬ್ಬಂದಿಗಳ ವೈಯಕ್ತಿಕ ಜೀವನವನ್ನ ಸುಧಾರಿಸುವ ದೃಷ್ಟಿಯಿಂದ ಮಾಡಲಾಗುತ್ತಿದ್ದು, ಇದರಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ದಂಪತಿಗಳಿಗೆ ಒಟ್ಟಿಗೆ ಇರಲು ಸಹಾಯ ಮಾಡುತ್ತದೆ.
ಮೊದಲು ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಂಬಂಧಿಸಿದಂತೆ ಅಂತರ್ಜಿಲ್ಲಾ ವರ್ಗಾವಣೆಗೆ ಯಾವುದೇ ಸರಿಯಾದ ನಿಯಮಗಳು ಇರಲಿಲ್ಲ. ಹಾಗಾಗಿ ಈ ವಿಚಾರವಾಗಿ 2024ರ ಜುಲೈನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಕಾನ್ಸ್‌ಟೇಬಲ್‌ಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸೂಕ್ತ ನಿಯಮಗಳನ್ನು ರೂಪಿಸಿ, ಜಾರಿಗೆ ತರಲಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಆ ಘೋಷಣೆಯಂತೆ ಈಗ ಆ ನಿಯಮ ಜಾರಿಗೆ ಬಂದಿದ್ದು, ಗಂಡ-ಹೆಂಡತಿ ಇಬ್ಬರು ಒಂದೇ ಜಿಲ್ಲೆಯಲ್ಲಿ ಸೇವೆ ಮಾಡಲು ಅವಕಾಶ ಕೊಡುವ ಈ ನಿರ್ಧಾರದಿಂದ ಕುಟುಂಬದ ಒಗ್ಗಟ್ಟನ್ನು ಕಾಪಾಡಬಹುದಾಗಿದ್ದು, ಇದು ಬಹಳ ಮಹತ್ವದ ಪಾತ್ರ ವಹಿಸುತ್ತದೆ ಎನ್ನಲಾಗುತ್ತಿದೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಸ್ಫೂರ್ತಿ ಪಡೆದ ರಾಜ್ಯ ಸರ್ಕಾರ
ರಾಜ್ಯ ಸರ್ಕಾರದ ಈ ಹೊಸ ನಿಯಮವು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಕೆಲವು ತೀರ್ಪುಗಳಿಂದ ಪ್ರೇರಿತವಾಗಿದ್ದು, ಅದರ ತತ್ವಗಳನ್ನ ಆಧಾರಿಸಿ ಮಾಡಲಾಗಿದೆ. ಅದರಲ್ಲೂ ಈ ವರ್ಗಾವಣೆ ನಿಯಮವನ್ನ ಕಡ್ಡಾಯವಾಗಿ ಪರಿಗಣಿಸಬೇಕು ಎಂದು ಸೂಚನೆ ಕೊಟ್ಟಿರುವುದು ರಾಜ್ಯದಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಬದಲಾವಣೆಗೆ ಆಗಲಿದೆ. ಮುಖ್ಯವಾಗಿ ಸರ್ಕಾರದ ಈ ನಿರ್ಧಾರದಿಂದ ಪೊಲೀಸ್ ಸಿಬ್ಬಂದಿಯ ಮನೋಬಲವನ್ನು ಹೆಚ್ಚಿಸಬಹುದಾಗಿದ್ದು, ಇದು ಅವರ ಕುಟುಂಬ ಜೀವನವನ್ನ ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಅನೇಕ ಪೊಲೀಸ್ ದಂಪತಿಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಈ ನಿಯಮದ ಕಾರಣದಿಂದ ಒಟ್ಟಿಗೆ ಇರಲು ಸಹಾಯವಾಗುತ್ತದೆ. ಆದರೆ ಈ ರೀತಿ ಜಿಲ್ಲೆಗಳ ವರ್ಗಾವಣೆಯಿಂದ ಅವರ ಇಲಾಖೆಯಲ್ಲಿನ ಹಿರಿಯತನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾತ್ರ ಯಾವುದೇ ಮಾಹಿತಿ ಇಲ್ಲ.
