ಚಿನ್ನ ಕಳವುಗೆ ಸಿಸಿಟಿವಿ, ಶ್ವಾನಗಳೂ ವಿಫಲ- 100 ದಿನವಾದರೂ ಆರೋಪಿಗಳ ಅತ್ತ ಸುಳಿವು ಇಲ್ಲ

ಮಂಗಳೂರು : ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿಗಿ ಬಂದೋಬಸ್ತ್ ಇರುವ ರಾಜ್ಯ ಹೆದ್ದಾರಿ-67ರ ಪೆರ್ಮುದೆಯ ಮನೆಯೊಂದರಲ್ಲಿ ನಡೆದ ಕೋಟ್ಯಂತರ ರೂ. ಮೌಲ್ಯದ 1 ಕೆಜಿಗೂ ಹೆಚ್ಚು ತೂಕದ ಚಿನ್ನಾ ಭರಣ ಕಳವು ಪ್ರಕರಣಕ್ಕೆ ಬುಧವಾರ 100 ದಿನಗಳಾಗುತ್ತದೆ. ಆದರೆ ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ.

ಏ.1ರ ಮಧ್ಯರಾತ್ರಿ ಕುವೈಟ್ ನಲ್ಲಿ ಉದ್ಯಮಿಯಾಗಿದ್ದ ದಿ. ಪಿ.ಬಿ.ಪಿಂಟೋ ಅವರ ಪೆರ್ಮುದೆಯ ನಿವಾಸ ‘ಮಾತೃಕೃಪಾ’ದ ಹಿಂದುಗಡೆಯ ಬಾಗಿಲು, ಕಿಟಕಿ ಒಡೆದು ಮನೆಯೊಳಗಿರುವ ಲಾಕರ್ ತೆರೆದು ಒಂದು ಕೆಜಿಗೂ ಹೆಚ್ಚು ತೂಕದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದು ಜು.9ಕ್ಕೆ ಬರೋಬ್ಬರಿ 100 ದಿನಗಳಾದರೂ ಆರೋಪಿಗಳು ಪತ್ತೆ ಯಾಗಿಲ್ಲ, ಚಿನ್ನಾ ಭರಣವೂ ಇಲ್ಲ. ಯಾವುದೇ ಸುಳಿವೂ ಇಲ್ಲ. ಏ.1ರಂದು ನಡೆದಿರುವ ಈ ಘಟನೆ ಯಲ್ಲಿ ಏಪ್ರಿಲ್ ಫೂಲ್ ಆದವರು ಯಾರು ಎಂಬುದು ಪ್ರಶ್ನೆ ಯಾಗಿಯೇ ಉಳಿದಿದೆ.45ಕ್ಕೂ ಹೆಚ್ಚು ಮಂದಿಯ ವಿಚಾರಣೆ :
ಪ್ರಕರಣದ ತನಿಖೆಗಾಗಿ ಬಜಪೆ ಪೊಲೀಸರು, ಎಸಿಪಿ ಹಾಗೂ ಸಿಸಿಬಿ ವಿಶೇಷ ತಂಡಗಳನ್ನು ರಚಿಸಿ ಶೋಧಕಾರ್ಯ ನಡೆದರೂ ಈವರೆಗಿನ ಫಲಿತಾಂಶ ಶೂನ್ಯ. ಆದರೆ ಘಟನೆ ನಡೆದ ಮನೆಗೆ 2024ರ ಜೂನ್ ಬಳಿಕ ಮನೆ ಮಂದಿ ಯಾರೂ ಬಂದೇ ಇಲ್ಲ. ಮನೆಮಂದಿಯ ವಾಸ ಮತ್ತು ಉದ್ಯಮ, ಕುವೈಟ್ ನಲ್ಲಿದ್ದು ಪೆರ್ಮುದೆಯ ಮನೆಗೆ ಸಂಬಂಧಿಸಿದಂತೆ ಕಾರ್ಮಿಕರು, ವಾಚ್ಮೆನ್ ಗಳು, ಸಂಬಂಧಿ ಕರು, ಫ್ರೆಂಡ್ಸ್ ಸೇರಿದಂತೆ ಈವರೆಗೂ 45ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಪ್ರಕರಣ ಬಗ್ಗೆ ಸಂಶಯ ವ್ಯಕ್ತವಾಗಿದೆಯೇ ಹೊರತು ಖಚಿತ ಸುಳಿವು ಸಿಕ್ಕಿಲ್ಲ.ಮನೆಯಲ್ಲಿದೆ 16 ಸಿಸಿ ಕ್ಯಾಮೆರಾ, 12 ತರಬೇತಿ ಪಡೆದ ಶ್ವಾನಗಳು!
ಮನೆಯೊಳಗೆ ಮತ್ತು ಹೊರ ಆವರಣದಲ್ಲಿ ಒಟ್ಟು 16 ಅತ್ಯಾಧುನಿಕ ನೈಟ್ ವಿಷನ್ ರೊಟೇಟಿಂಗ್ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ತರಬೇತಿ ಪಡೆದ ಹೈಬ್ರಿಡ್ ತಳಿಯ ನಾಯಿಗಳು, ಇಬ್ಬರು ಗಾರ್ಡ್ ಗಳು ಇದ್ದು ಕಳ್ಳರು ನುಗ್ಗಿದ ದಾರಿಯ ಸುಳಿವು ನೀಡಬಹುದಾಗಿದ್ದ ಸಿಸಿ ಕ್ಯಾಮೆರಾವನ್ನು ಮೇಲ್ಮುಖವಾಗಿ ತಿರುಚಲಾಗಿದ್ದರೆ ಹೊರಾವರಣದ ಪ್ರಮುಖ ಚಲನವಲನಗಳ ಬಗ್ಗೆ ದೃಶೀಕರಿಸಬಹುದಾಗಿದ್ದ ಸಿಸಿ ಕ್ಯಾಮೆರಾ ವೊಂದಕ್ಕೆ ಮನೆಯವರದ್ದೇ ಕಟ್ಟಡದಲ್ಲಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಬ್ಯಾನರ್ ಅಡ್ಡಲಾಗಿ ಕಟ್ಟಲಾಗಿತ್ತು ಅನ್ನುವುದು ಪೊಲೀಸರಿಗೆ ತಿಳಿದದ್ದೇ ಒಂಬತ್ತು ದಿನಗಳ ಬಳಿಕ ಎನ್ನುವುದು ಅಚ್ಚರಿಯ ಸಂಗತಿ.
