ಮಗಳ ಮದುವೆಗೆ ಸಂಗ್ರಹಿಸಿದ ಬಂಗಾರ ಕಳವು – ಮಾಜಿ ಯೋಧರ ಮನೆಯಲ್ಲಿ ಕಳ್ಳತನ

ಬೀದರ್: ಮಗಳ ಮದುವೆಗೆಂದು ಚಿನ್ನಾಭರಣ ಖರೀದಿಸಿದ್ದ ಮಾಜಿ ಯೋಧರೊಬ್ಬರು ಲಗ್ನ ಪತ್ರಿಕೆ ಹಂಚಲು ಹೋಗಿದ್ದರೆ, ಇತ್ತ ಖದೀಮರು ಮನೆಗೆ ಕನ್ನ ಹಾಕಿದ್ದಾರೆ. ಮಗಳ ಮದುವೆಗೆಂದು ಮಾಡಿದ್ದ 16 ತೊಲೆ ಬಂಗಾರ, 5 ತೊಲೆ ಬೆಳ್ಳಿ ಇದೀಗ ಕಳ್ಳರ ಪಾಲಾಗಿದೆ.

ಬೀದರ್ ನಗರದ ಸಂಗಮೇಶ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಮಾಜಿ ಯೋಧ ವೀರಶೆಟ್ಟಿ ಘಾಳೆಪ್ಪಾ ರಾಮಶೆಟ್ಟಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.
ಮನೆಗೆ ಕನ್ನ ಹಾಕಿದ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. 16 ತೊಲೆ ಬಂಗಾರ, 5 ತೊಲೆ ಬೆಳ್ಳಿ, 30 ಸಾವಿರ ನಗದು ಲೂಟಿ ಮಾಡಿದ್ದಾರೆ.
ಈ ಬಗ್ಗೆ ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.