ಪನ್ನಾದಲ್ಲಿ ಬಾಲಕಿ ಮೇಲೆ ಮತ್ತೆ ಅತ್ಯಾಚಾರ: ಸಿಡಬ್ಲ್ಯೂಸಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಪನ್ನಾ: ಅತ್ಯಾಚಾರ ಸಂತ್ರಸ್ತೆಯ ಮೇಲೆ ಆರೋಪಿ ಮತ್ತೊಮ್ಮೆ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಪನ್ನಾದಲ್ಲಿ ನಡೆದಿದೆ. 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದ, ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ) ಅಧಿಕಾರಿಗಳು ಆಕೆಯನ್ನು ಮತ್ತೆ ಆರೋಪಿಯ ಮನೆಗೆ ಕಳುಹಿಸಿದ್ದಾರೆ, ಅಲ್ಲಿ ಆತ ಮತ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಆಕೆಯನ್ನು ಆತನ ಮನೆಗೆ ಕಳುಹಿಸಿದ್ದೇಕೆ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

ಛತ್ತರ್‌ಪುರ ಪೊಲೀಸರು ಸಿಡಬ್ಲ್ಯೂಸಿ ಅಧ್ಯಕ್ಷರು, ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ 10 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.ಪನ್ನಾ ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿದ್ದ ಅಪ್ರಾಪ್ತ ಬಾಲಕಿ ಶಾಲೆಗೆ ಹೊರಟ ನಂತರ ಕಾಣೆಯಾದಾಗ ಜನವರಿ 16, 2025 ರಂದು ಕುಟುಂಬವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿತ್ತು.
ಫೆಬ್ರವರಿ 17, 2025 ರಂದು ಹರಿಯಾಣದ ಗುರುಗ್ರಾಮದಲ್ಲಿ ಆಕೆಯನ್ನು ಪತ್ತೆಹಚ್ಚಲಾಯಿತು. ಆಕೆಯ ಜತೆಗಿದ್ದ ಆರೋಪಿಯನ್ನು ಕೂಡ ವಶಕ್ಕೆ ಪಡೆಯಲಾಯಿತು.ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಆತನನ್ನು ಬಂಧಿಸಲಾಯಿತು, ಅಪಹರಣ ಮತ್ತು ಅತ್ಯಾಚಾರದ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಯಿತು. ಆರಂಭದಲ್ಲಿ ಪನ್ನಾ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ನಂತರ ಛತ್ತರ್‌ಪುರ ಜಿಲ್ಲೆಯ ಜುಜಾರ್ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.
ಸಂತ್ರಸ್ತೆಯನ್ನು ಪುನರ್ವಸತಿಗಾಗಿ ಪನ್ನಾ ಸಿಡಬ್ಲ್ಯೂಸಿ ಮುಂದೆ ಹಾಜರುಪಡಿಸಲಾಯಿತು ಮತ್ತು ಆರಂಭದಲ್ಲಿ ಅವರನ್ನು ಪನ್ನಾದಲ್ಲಿರುವ ಒನ್ ಸ್ಟಾಪ್ ಸೆಂಟರ್ನಲ್ಲಿ ಇರಿಸಲಾಯಿತು. ಆದಾಗ್ಯೂ, ಸಮಿತಿಯು ಕಡ್ಡಾಯ ಕಾರ್ಯವಿಧಾನಗಳನ್ನು ಉಲ್ಲಂಘಿಸಿ ಆರೋಪಿಯ ಅತ್ತಿಗೆಯ ಮನೆಗೆ ಕಳುಹಿಸಿದೆ ಆರೋಪಿಸಲಾಗಿದೆ. ಆಕೆ ಸಂತ್ರಸ್ತೆಯ ದೂರದ ಸಂಬಂಧಿ ಕೂಡ ಹೌದು. ಅಲ್ಲಿ ಮತ್ತೆ ಆರೋಪಿಯು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಆದರೆ ಆರೋಪಿ ಜೈಲಿನಿಂದ ಯಾವಾಗ ಬಿಡುಗಡೆಗೊಂಡಿದ್ದ ಎನ್ನುವ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಸಂತ್ರಸ್ತೆಯ ಕುಟುಂಬವು ಆಕೆಯ ಮರಳುವಿಕೆಗಾಗಿ ಪನ್ನಾ ಕಲೆಕ್ಟರೇಟ್‌ನ ಸಾರ್ವಜನಿಕ ವಿಚಾರಣೆಯಲ್ಲಿ ದೂರು ದಾಖಲಿಸಿತು. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ, ಸಿಡಬ್ಲ್ಯೂಸಿ ತನ್ನ ತೀರ್ಪನ್ನು ಪರಿಶೀಲಿಸುವಂತೆ ಆದೇಶಿಸಿದರು. ಪ್ರಮಾದವನ್ನು ಮರೆಮಾಚಲು, ಅಧಿಕಾರಿಗಳು ಏಪ್ರಿಲ್ 29, 2025 ರಂದು ಬಾಲಕಿಯನ್ನು ಮತ್ತೆ ಒಎಸ್‌ಸಿಗೆ ಸ್ಥಳಾಂತರಿಸಿದ್ದಾರೆಂದು ವರದಿಯಾಗಿದೆ.
ಅಪ್ರಾಪ್ತ ವಯಸ್ಕ ಅತ್ಯಾಚಾರ ಸಂತ್ರಸ್ತೆಯನ್ನು ಆರೋಪಿಯ ಮನೆಗೆ ಕಳುಹಿಸುವ ತಪ್ಪು ನಿರ್ಧಾರ ತೆಗೆದುಕೊಂಡವರು ಮತ್ತು ಅದನ್ನು ಬಚ್ಚಿಟ್ಟವರ ವಿರುದ್ಧ ಅಪರಾಧ ದಾಖಲಿಸಲಾಗಿದೆ. ಪೊಲೀಸರು ಈ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.
ಹಲವಾರು ಕಾನೂನು ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಅಪರಾಧಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೋಕ್ಸೊ ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
