ಪ್ರಥಮ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 6.8–7, ಆರ್‌ಬಿಐ ಗುರಿಗಿಂತ ಮೇಲು

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆಯು ನಿರೀಕ್ಷೆ ಮೀರಿ ವೇಗ ಪಡೆದಿರುವ ಸಾಧ್ಯತೆ ಇದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವರದಿಯೊಂದು ಹೇಳಿದೆ. ಇದರ ವಿಶ್ಲೇಷಣೆಯ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6.8ರಿಂದ ಶೇ. 7ರ ಆಸುಪಾಸಿನ ದರಲ್ಲಿ ಆಗಬಹುದು ಎಂದಿದೆ. ಆರ್‌ಬಿಐ ಮಾಡಿದ ಅಂದಾಜು ಪ್ರಕಾರ ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 6.5ರಷ್ಟು ಹೆಚ್ಚುವ ನಿರೀಕ್ಷೆ ಇತ್ತು. ಎಸ್ಬಿಐ ಲೆಕ್ಕಾಚಾರದ ಪ್ರಕಾರ ಆರ್‌ಬಿಐ ಅಂದಾಜಿಗಿಂತಲೂ ಉತ್ತಮ ಆರ್ಥಿಕ ಬೆಳವಣಿಗೆ ಈ ತ್ರೈಮಾಸಿಕದಲ್ಲಿ ಆಗಿರಬಹುದು.

ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಜಿಡಿಪಿ ಬೆಳವಣಿಗೆ ಶೇ. 6.9ರಷ್ಟು ಇರಬಹುದು. ಜಿವಿಎ ಶೇ. 6.5ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ‘ಆರಂಭಿಕ ಅಂದಾಜುಪ್ರಕಾರ ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಸುಮಾರು ಶೇ. 6.8ರಿಂದ ಶೇ. 7.0ರಷ್ಟು ಇರಬಹುದು’ ಎಂದು ಎಸ್ಬಿಐ ಅನಾಲಿಸಿಸ್ ವರದಿಯಲ್ಲಿ ಹೇಳಲಾಗಿದೆ.
ಇಡೀ ವರ್ಷಕ್ಕೆ ಜಿಡಿಪಿ ಬೆಳವಣಿಗೆ ನಿರೀಕ್ಷೆಗಿಂತ ಕಡಿಮೆ?
ಮೊದಲ ಕ್ವಾರ್ಟರ್ನಲ್ಲಿ ಆರ್‌ಬಿಐ ಅಂದಾಜು ಮಾಡಿದ ಶೇ. 6.5ರ ದರಕ್ಕಿಂತಲೂ ಹೆಚ್ಚಿನ ಜಿಡಿಪಿ ಬೆಳವಣಿಗೆ ಆಗಬಹುದು ಎಂದು ಎಸ್ಬಿಐ ವಿಶ್ಲೇಷಕರು ಹೇಳಿದ್ದಾರಾದರೂ, ಒಟ್ಟಾರೆ ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯು ಕಡಿಮೆ ದಾಖಲಾಗಬಹುದು ಎಂದಿದ್ದಾರೆ.
ಆರ್‌ಬಿಐ ಮಾಡಿದ ಅಂದಾಜು ಪ್ರಕಾರ 2025-26ರಲ್ಲಿ ಜಿಡಿಪಿ ಶೇ. 6.5ರಷ್ಟು ಹೆಚ್ಚುವ ನಿರೀಕ್ಷೆ ಇತ್ತು. ಆದರೆ, ಎಸ್ಬಿಐ ಮಾಡಿದ ಅಂದಾಜು ಪ್ರಕಾರ ಈ ವರ್ಷದ ಆರ್ಥಿಕ ಬೆಳವಣಿಗೆ ಶೇ. 6.3ಕ್ಕೆ ಸೀಮಿತಗೊಳ್ಳಬಹುದು.
ಹಣದುಬ್ಬರ ಬಹಳ ಕಡಿಮೆ ಮಟ್ಟದಲ್ಲಿರುವುದರಿಂದ ನಾಮಿನಲ್ ಜಿಡಿಪಿ ಮತ್ತು ರಿಯಲ್ ಜಿಡಿಪಿ ನಡುವಿನ ಅಂತರ ಕಡಿಮೆ ಆಗಿದೆ. ಮೊದಲ ಕ್ವಾರ್ಟರ್ನಲ್ಲಿ ರಿಯಲ್ ಜಿಡಿಪಿ ಶೇ. 6.5ರಿಂದ ಶೇ. 7.0ರಷ್ಟು ಇರಬಹುದು. ನಾಮಿನಲ್ ಜಿಡಿಪಿ ಶೇ. 8ರಷ್ಟಿರಬಹುದು ಎಂದು ಎಸ್ಬಿಐ ಅನಾಲಿಸಿಸ್ ಹೇಳಿದೆ.
