50 ಲಕ್ಷ ಕೊಟ್ಟು ಬಿಗ್ಬಾಸ್ ಶೋ ಕನಸು – ಡಾಕ್ಟರ್ಗೆ ಬಂಪರ್ ವಂಚನೆ

ಭೋಪಾಲ್: ಬಿಗ್ಬಾಸ್ ಕಾರ್ಯಕ್ರಮವು ಪ್ರೇಕ್ಷಕರಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟಿಸಿರುವುದು ಗೊತ್ತೇ ಇದೆ. ಬಿಗ್ಬಾಸ್ ಸ್ಪರ್ಧಿಯಾದರೆ ಸಾಕು, ನಮ್ಮ ರೇಂಜ್ ಚೇಂಜ್ ಆಗಿಬಿಡುತ್ತೆ ಅಂತಾನೇ ಬಹುತೇಕರು ಅಂದುಕೊಂಡಿದ್ದಾರೆ. ಅಯ್ಯೋ ಬಿಗ್ಬಾಸ್ ಮನೆಗೆ ಹೋಗಲು ನನಗೊಂದು ಚಾನ್ಸ್ ಸಿಗಬಾರದಾ?

ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಬಿಗ್ಬಾಸ್ನಲ್ಲಿ ಮಿಂಚಿದವರ ಪೈಕಿ ಹಲವರ ಸ್ಟಾರ್ಗಿರಿ ಕೂಡ ಬದಲಾಗಿದೆ. ಕನ್ನಡದಲ್ಲಿಯೂ ಬಿಗ್ಬಾಸ್ ಸೀಸನ್-12ಕ್ಕೆ ವೇದಿಕೆ ರೆಡಿಯಾಗುತ್ತಿದೆ. ಅನೇಕರು ಈ ಸೀಸನ್ಗೆ ನಾನೂ ಹೋಗಬೇಕು ಎಂದು ಕನಸು ಕಂಡಿದ್ದಾರೆ. ಕೆಲವರು ಹಣ ಕೊಟ್ಟರೆ, ಇನ್ಫ್ಲುಯೆನ್ಸ್ ಇದ್ರೆ ಸಲೀಸಾಗಿ ಬಿಗ್ಬಾಸ್ ಹೋಗಬಹುದು ಎಂದು ಹೇಳುತ್ತಾರೆ. ಅದೇ ರೀತಿ ವೈದ್ಯರೊಬ್ಬರು ಬಿಗ್ಬಾಸ್ ಮನೆಗೆ ಹೀಗಲು ಬರೋಬ್ಬರಿ ₹50 ಲಕ್ಷಕ್ಕೆ ಡೀಲ್ ಮಾತನಾಡಿ, ₹10 ಲಕ್ಷ ಅಡ್ವಾನ್ಸ್ ಕೊಟ್ಟಿದ್ದಾರೆ.
ಬಿಗ್ಬಾಸ್ನಲ್ಲಿ ಸಾಮಾನ್ಯವಾಗಿ ಸೆಲೆಬ್ರಿಟಿಗಳು, ಕಾಂಟ್ರವರ್ಸಿ ಮಾಡಿಕೊಂಡವರೇ ಇರುತ್ತಾರೆ. ಇದರಲ್ಲಿ ಸಿನಿಮಾ ಹಾಗೂ ಕಿರುತೆರೆಯವರದ್ದು ಮೇಲುಗೈ, ಇದರ ಜೊತೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಹೈಲೈಟ್ ಆಗುವವವರು ಕೂಡ ಸುಲಭವಾಗಿ ಬಿಗ್ಬಾಸ್ ಎಂಟ್ರಿ ಪಡೆದುಕೊಂಡಿರುವ ಉದಾಹರಣೆಗಳಿವೆ. ಕೆಲವರು ಬಿಗ್ಬಾಸ್ಗೆ ಹೋಗಲೇಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹುಚ್ಚಾಟ ಮೆರೆಯುತ್ತಿರುವುದು ಮುಂದುವರಿದಿದೆ. ಈ ಹಿಂದೆ ಕಾಮನ್ ಮ್ಯಾನ್ಗೂ ಬಿಗ್ಬಾಸ್ನಲ್ಲಿ ಅವಕಾಶ ಕೊಡಲಾಗಿತ್ತು. ಆದರೆ ಹಣ ಕೊಟ್ಟರೆ ಸುಲಭವಾಗಿ ಬಿಗ್ಬಾಸ್ ಸ್ಪರ್ಧಿಯಾಗಬಹುದು ಎಂದು ಡಾಕ್ಟರ್ ಹಣ ನೀಡಿದ್ದಾರೆ.
ಡಾಕ್ಟರ್ಗೆ ಮೊದಲಿನಿಂದಲೂ ಬಿಗ್ಬಾಸ್ ಮನೆಗೆ ಹೋಗಬೇಕು ಎಂಬ ಆಸೆ ಇತ್ತು. ಹೀಗಾಗಿ ಅವಕಾಶಕ್ಕಾಗಿ ಕಾಯುತ್ತಿದ್ದರು. ಅದರಂತೆ ಅವಕಾಶ ಪಡೆಯಲು ₹50 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದು, ₹10 ಲಕ್ಷವನ್ನು ಮುಂಗಡವಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನೇನು ನಾನು ಬಿಗ್ಬಾಸ್ನಲ್ಲಿ ಮಿಂಚುವುದು ಫಿಕ್ಸ್, ನಾನು ಇನ್ಮುಂದೆ ಸೆಲೆಬ್ರಿಟಿಯಾಗ್ತೀನಿ ಎಂದು ಡಾಕ್ಟರ್ ಫುಲ್ ಖುಷಿಯಾಗಿದ್ದಾರೆ. ಆದರೆ ಡಾಕ್ಟರ್ಗೆ ಕೊನೆಗೆ ಅಸಲಿ ಸತ್ಯ ಗೊತ್ತಾಗಿ, ದೊಡ್ಡ ಸ್ಟಾರ್ ಆಗುವ ಬದಲು ದೊಡ್ಡ ಸುದ್ದಿಯಾಗಿದ್ದಾರೆ.
ಹಣ ಕೊಟ್ಟರೆ ಬಿಗ್ಬಾಸ್ಗೆ ಹೋಗಬಹುದಾ?
ಭೋಪಾಲ್ನ ಚರ್ಮರೋಗ ತಜ್ಞರೊಬ್ಬರಿಗೆ ಬಿಗ್ಬಾಸ್ ಟಿವಿ ರಿಯಾಲಿಟಿ ಶೋಗೆ ಹಿಂಬಾಗಿಲಿನಿಂದ ಪ್ರವೇಶ ನೀಡುವ ಭರವಸೆ ನೀಡಿ ₹10 ಲಕ್ಷ ಹಣ ಪಡೆದು ವಂಚನೆ ಮಾಡಲಾಗಿದೆ. ಭೋಪಾಲ್ನ ಕೊಲ್ಹಾರ್ ರಸ್ತೆಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ. ಅಭಿನೀತ್ ಗುಪ್ತಾ ಅವರನ್ನು ಮುಂಬೈನಲ್ಲಿರುವ ಈವೆಂಟ್ ಕಂಪನಿಯ ನಿರ್ದೇಶಕ ಕರಣ್ ಸಿಂಗ್ ಅಲಿಯಾಸ್ ಪ್ರಿನ್ಸ್ ಎಂಬುವವರು ಸಂಪರ್ಕಿಸಿದ್ದರು.
ವೈದ್ಯನ ಆಸೆ ಆಕಾಂಕ್ಷೆಗಳನ್ನು ತಿಳಿದುಕೊಂಡು, ಬಿಗ್ಬಾಸ್ಗೆ ಕಳಿಸಿಕೊಡುವುದಾಗಿ ₹50 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದ. ಬಳಿಕ ₹10 ಲಕ್ಷವನ್ನು ಮುಂಗಡವಾಗಿ ಪಡೆದಿದ್ದು, ಮುಂಬರುವ ಸೀಸನ್ನಲ್ಲಿ ಸ್ಪರ್ಧಿಯಾಗುತ್ತೀರಿ ಎಂದು ಡಾ.ಗುಪ್ತಾ ಅವರಿಗೆ ಭರವಸೆ ನೀಡಿದ್ದ. ಆದರೆ ಹೊಸ ಸೀಸನ್ನಲ್ಲಿ ಸ್ಪರ್ಧಿಗಳನ್ನು ಘೋಷಿಸಿದಾಗ ಡಾ.ಗುಪ್ತಾ ಅವರ ಹೆಸರೇ ಇರಲಿಲ್ಲ. ವೈದ್ಯರು ತಮ್ಮ ಹಣ ಹಿಂತಿರುಗಿಸುವಂತೆ ಕೇಳಿದಾಗ, ಕರಣ್ ಫೋನ್ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದರು. ನಂತರ ಡಾಕ್ಟರ್ ಪೊಲೀಸರಿಗೆ ದೂರು ನೀಡಿದ್ದಾರೆ.
ವೈದ್ಯನಿಗೆ ವಂಚನೆ ಮಾಡಿದ ಕರಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಅಲ್ಲದೆ ಇದೇ ರೀತಿ ಆತ ಹಲವರಿಗೆ ವಂಚನೆ ಮಾಡಿರುವ ಶಂಕೆ ಇದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಕನ್ನಡ ಬಿಗ್ಬಾಸ್ಗೆ ಹೋಗಲು ಕೂಡ ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ಹಣ ಕೊಟ್ಟರೆ ನಾವೂ ಬಿಗ್ಬಾಸ್ ಹೋಗಬಹುದು ಎಂದು ಭಾವಿಸಿದ್ದಾರೆ. ಆದರೆ ಈ ಬಗ್ಗೆ ಇತ್ತೀಚೆಗೆ ಕ್ಲಾರಿಟಿ ಕೊಟ್ಟಿದ್ದ ಬಿಗ್ಬಾಸ್ ವಿನ್ನರ್ ಪ್ರಥಮ್, ಹಣ, ಇನ್ಫ್ಲುಯೆನ್ಸ್ ಎಲ್ಲ ನಡೆಯಲ್ಲ ಎಂದಿದ್ದರು.