ಮಾನಸಿಕ ಅಸ್ವಸ್ಥನ ಮೇಲೆ ಗೋರಕ್ಷಕರ ದಾಳಿ; ಮೂವರು ಅರೆಸ್ಟ್!

ಝಾಲಾವರ್ (ರಾಜಸ್ಥಾನ): ಹಸುವನ್ನು ಕೊಂದು ಗೋಮಾಂಸ ಸೇವಿಸಿರುವ ಶಂಕೆಯಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರ ಮೇಲೆ ಸ್ವಯಂಘೋಷಿತ ಗೋರಕ್ಷಕರು ಹಲ್ಲೆ ನಡೆಸಿರುವ ಘಟನೆ ಜನವರಿ 1ರಂದು ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಹಸಿಲ್‌ನ ಕಿಶನ್‌ಪುರ ಗ್ರಾಮದಲ್ಲಿ ನಡೆದಿದೆ ಎಂದು altnews.in ವರದಿ ಮಾಡಿದೆ.

ಹಲ್ಲೆಗೆ ಒಳಗಾದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿವೆ. ಒಂದು ವೀಡಿಯೊದಲ್ಲಿ ಕಸದ ರಾಶಿಯ ಸಮೀಪ ನೆಲದ ಮೇಲೆ ಕುಳಿತಿರುವ ವ್ಯಕ್ತಿಯು ಕಾಣಿಸಿಕೊಂಡಿದ್ದು, ಹತ್ತಿರದಲ್ಲೇ ದನದ ಅವಶೇಷಗಳಂತೆ ಕಾಣುವ ವಸ್ತುಗಳು ಗೋಚರಿಸುತ್ತವೆ. ಗುಂಪಿನಲ್ಲಿದ್ದವರು ಆತನನ್ನು ಪ್ರಶ್ನಿಸುತ್ತಾ, “ಹಸು ನಮ್ಮ ತಾಯಿ” ಎಂದು ಹೇಳುವಂತೆ ಒತ್ತಾಯಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಕೆಲವರು ಆ ವ್ಯಕ್ತಿ ಹೊರಗಿನವನು ಎಂದು ಹೇಳುತ್ತಿರುವುದೂ ಕೇಳಿಸುತ್ತದೆ.

ಮತ್ತೊಂದು ವೀಡಿಯೊದಲ್ಲಿ, ಆರೋಪಿಗಳು ಆತನನ್ನು ರಸ್ತೆಯ ಮಧ್ಯಕ್ಕೆ ಎಳೆದುಕೊಂಡು ಹೋಗಿ ಥಳಿಸುವುದು, ಅವಮಾನಿಸುವುದು ಮತ್ತು ಮುಂದೆ ಬರುತ್ತಿದ್ದ ಟ್ರಕ್ ಅನ್ನು ಆತನ ಮೇಲೆ ಓಡಿಸಲು ಪ್ರಯತ್ನಿಸಿರುವ ದೃಶ್ಯಗಳು ಕಂಡುಬಂದಿವೆ. ನೋವಿನಿಂದ ಆತ “ಅಯ್ಯೋ ಅಪ್ಪಾ!” ಎಂದು ಕೂಗುತ್ತಾನೆ. ಈ ವೇಳೆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ “ಅವನು ಕೊನೆಗೂ ಮುಸ್ಲಿಂ” ಎಂದು ಹೇಳಿರುವುದು ಕೇಳಿಸುತ್ತದೆ. “ಅಯ್ಯೋ ಅಪ್ಪಾ” ಎಂಬ ಪದ ಬಳಕೆಯಿಂದ ಸಂತ್ರಸ್ತ ದಕ್ಷಿಣ ಭಾರತದ ಭಾಗದವನು ಇರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.

ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಅವರನ್ನು Alt News ಸಂಪರ್ಕಿಸಿದಾಗ, ವೈರಲ್ ವೀಡಿಯೊಗಳ ಆಧಾರದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ. ಹಸುವನ್ನು ಹತ್ಯೆ ಮಾಡಿ ಗೋಮಾಂಸ ಸೇವಿಸಿದ್ದಾನೆ ಎಂಬ ಶಂಕೆಯ ಮೇರೆಗೆ ಹಲ್ಲೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂತ್ರಸ್ತ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಸತ್ತ ಹಸುವಿನ ಅವಶೇಷಗಳ ಬಳಿ ಕುಳಿತಿದ್ದನು ಎಂದು ಅಕ್ಲೇರಾ ಪೊಲೀಸ್ ಇನ್ಸ್‌ಪೆಕ್ಟರ್ ಧರ್ಮರಾಮ್ ತಿಳಿಸಿದ್ದಾರೆ. ಆತ ಅಲೆಮಾರಿಯಾಗಿದ್ದರಿಂದ ಹಲ್ಲೆಯ ಬಳಿಕ ಸ್ಥಳದಿಂದ ಹೊರಟುಹೋಗಿದ್ದು, ಇನ್ನೂ ಪತ್ತೆಯಾಗಿಲ್ಲ. ಹಲ್ಲೆ ನಡೆಸಿದ ಆರೋಪಿಗಳನ್ನು ರಾಕೇಶ್, ರೋಹನ್ ಮತ್ತು ಅಜಯ್ ಎಂದು ಗುರುತಿಸಲಾಗಿದೆ.