ಗಂಗೊಳ್ಳಿ ನಾಡದೋಣಿ ದುರಂತ: ಇಬ್ಬರು ಮೀನುಗಾರರ ಮೃತದೇಹ ಪತ್ತೆ, ಮತ್ತೊಬ್ಬರ ಶೋಧ ಮುಂದುವರಿಕೆ

ಕುಂದಾಪುರ: ಗಂಗೊಳ್ಳಿ ಸಮುದ್ರದಲ್ಲಿ ಮಂಗಳವಾರ ಸಂಭವಿಸಿದ ನಾಡದೋಣಿ ದುರಂತದಲ್ಲಿ ಸಮುದ್ರಪಾಲಾಗಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಪೈಕಿ ಇಬ್ಬರ ಮೃತದೇಹವು ಬುಧವಾರ ಪತ್ತೆಯಾಗಿದೆ.

ಕುಂದಾಪುರ ಕೋಡಿ ಸಮೀಪದ ಲೈಟ್‌ಹೌಸ್ ಬಳಿ ಸಮುದ್ರ ತೀರದಲ್ಲಿ ಬುಧವಾರ ಬೆಳಗಿನ ಜಾವ 4ಗಂಟೆ ಸುಮಾರಿಗೆ ಗಂಗೊಳ್ಳಿಯ ಬೇಲಿಕೇರಿಯ ದಿ.ನಾರಾಯಣ ಅವರ ಪುತ್ರ ಲೋಹಿತ್ ಖಾರ್ವಿ(39) ಎಂಬವರ ಮೃತದೇಹ ಪತ್ತೆಯಾಗಿದ್ದು ಸಂಜೆ ವೇಳೆ ಕೋಟೇಶ್ವರ ಸಮೀಪದ ಹಳೆಅಳಿವೆ ಎಂಬಲ್ಲಿ ಗಂಗೊಳ್ಳಿಯ ದಿ.ಶೀನ ಖಾರ್ವಿ ಎಂಬವರ ಪುತ್ರ ಜಗನ್ನಾಥ ಖಾರ್ವಿ(50) ಅವರ ಮೃತದೇಹ ಪತ್ತೆ ಯಾಗಿದೆ.
ನಾಪತ್ತೆಯಾದ ಇನ್ನೋರ್ವ ಮೀನುಗಾರ ಸುರೇಶ್ ಖಾರ್ವಿ (48) ಸುಳಿವು ರಾತ್ರಿವರೆಗೆ ದೊರೆತಿಲ್ಲ.
ಗಂಗೊಳ್ಳಿ ಬಂದರಿನಿಂದ ಜು.15ರಂದು ಬೆಳಗ್ಗೆ ನಾಲ್ವರು ಮೀನುಗಾರರು ಹಕ್ರೇಮಠ ಯಕ್ಷೇಶ್ವರಿ ಎಂಬ ಗಿಲ್‌ನೆಟ್ ನಾಡದೋಣಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ವಾಪಾಸ್ಸು ಬರುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ಮೂವರು ಮೀನುಗಾರರು ನೀರುಪಾಲಾಗಿದ್ದು, ಓರ್ವನನ್ನು ರಕ್ಷಿಸಲಾಗಿತ್ತು.
ನಿರಂತರ ಶೋಧ ಕಾರ್ಯ: ದುರಂತ ಸಂಭವಿಸಿದ ಎರಡನೇ ದಿನವಾದ ಬುಧವಾರವೂ ಬೆಳಗ್ಗೆ ಯಿಂದಲೇ ಕಾರ್ಯಾಚರಣೆಯನ್ನು ಮುಂದುವರೆಸ ಲಾಗಿತ್ತು. ಹಲವು ಗಂಟೆಗಳ ಬಳಿಕ ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಘಟನೆ ಮಾಹಿತಿ ಸಿಗುತ್ತಲೇ ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು, ಮೀನುಗಾರರು ದೌಡಾಯಿಸಿ ಶೋಧ ಕಾರ್ಯ ದಲ್ಲಿ ತೊಡಗಿಸಿಕೊಂಡಿದ್ದರು. ಕಳೆದೆರಡು ದಿನಗಳಿಂದ ಭಾರಿ ಮಳೆ-ಗಾಳಿಯೂ ಇರುವುದರಿಂದ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳಿದ್ದು ಶೋಧ ಕಾರ್ಯಾಚರಣೆಗೆ ತೊಡಕುಂಟಾಗಿದೆ.
ಇಂದು ಕರಾವಳಿ ಕಾವಲು ಪಡೆ ಪೊಲೀಸರು ಆಧುನಿಕ ತಂತ್ರಜ್ಞಾನದ 5 ಕಿ.ಮೀ. ವ್ಯಾಪ್ತಿಯ ದೂರ ಸೆರೆ ಹಿಡಿಯುವ ಡ್ರೋಣ್ ಕ್ಯಾಮೆರಾ ಬಳಸಿಯೂ ಕಾರ್ಯಾಚರಣೆ ನಡೆಸಿದರು. ಇದೀಗ ನಾಪತ್ತೆಯಾಗಿರುವ ಸುರೇಶ್ ಖಾರ್ವಿ ಅವರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ.
ಶಾಸಕ ಗುರುರಾಜ ಗಂಟಿಹೊಳೆ ಭೇಟಿ
ದೋಣಿ ದುರಂತದ ಸ್ಥಳಕ್ಕೆ ಬುಧವಾರ ಬೆಳಗ್ಗೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯ ಮೀನುಗಾರರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೀನುಗಾರರು ಬೋಟು, ದೋಣಿಯಲ್ಲಿ ಕಡಲಿಗೆ ಇಳಿಯು ವಾಗ ಜೀವ ರಕ್ಷಕ ಸಾಧನವಾದ ಲೈಫ್ ಜಾಕೆಟ್ ಧರಿಸಬೆಕು. ನಾಪತ್ತೆಯಾದವರ ಪತ್ತೆಗೆ ಕರಾವಳಿ ಕಾವಲು ಪಡೆ, ಪೊಲೀಸರ ತಂಡ, ಮುಳುಗು ತಜ್ಞರು, ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ, ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
‘ಇಬ್ಬರು ಮೀನುಗಾರರ ಮೃತದೇಹಗಳು ಬೇರೆಬೇರೆ ಕಡೆ ಪತ್ತೆಯಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಗಂಗೊಳ್ಳಿ ಹಾಗೂ ಜಿಲ್ಲಾ ಕೇಂದ್ರದ ಸುಮಾರು 30ಕ್ಕೂ ಅಧಿಕ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ. ಕಾರ್ಯಾಚರಣೆ ಸಲುವಾಗಿ ಜೆಟ್ ಸ್ಕೀ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು ಡ್ರೋಣ್ ಕ್ಯಾಮೆರಾ ಕೂಡ ಬಳಸಲಾಗಿತ್ತು. ಸ್ಥಳೀಯ ಮೀನುಗಾರರು, ನುರಿತ ಈಜುಪಟುಗಳನ್ನು ವಿಶ್ವಾಸಕ್ಕೆ ಪಡೆದು ಕರ್ತವ್ಯ ನಿರ್ವಹಿಸಲಾಗುತ್ತಿದೆ’
- ಮಿಥುನ್ ಎಚ್.ಎನ್., ಎಸ್ಪಿ, ಕರಾವಳಿ ಕಾವಲು ಪೊಲೀಸ್
