ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಜೂಜುಕೋರ ಸಾವು; ಮೂವರು ಕಾನ್‌ಸ್ಟೆಬಲ್‌ಗಳ ಅಮಾನತು

ಶಹಜಹಾನ್ಪುರ: ಪೊಲೀಸರು ಜೂಜು ಅಡ್ಡ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಅವರಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿ ಜೂಜುಕೋರನೊಬ್ಬ ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಜೂಜು ಅಡ್ಡೆ ಮೇಲೆ ದಾಳಿ ನಡೆಸಲು ಬಂದಿದ್ದ ಪೊಲೀಸರನ್ನು ನೋಡಿ ಭಯಪಟ್ಟು ಆರು ಜನರು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಖನ್ನೌತ್ ನದಿಗೆ ಹಾರಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.

ಐವರು ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರೆ, ಜೂಜುಕೋರರಿಗೆ ಸಾಲ ನೀಡಲು ಅಲ್ಲಿಗೆ ಹೋಗಿದ್ದ ತಿವಾರಿ (28) ಎಂದು ಗುರುತಿಸಲಾದ ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ. ಘಟನೆಯ ನಂತರ, ಮೃತರ ಕುಟುಂಬ ಸದಸ್ಯರು ಬುಧವಾರ ತಡರಾತ್ರಿ ಕೆರುಗಂಜ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಾನ್‌ಸ್ಟೆಬಲ್‌ಗಳಾದ ಪಂಕಜ್ ಕುಮಾರ್, ರಾಜೇಶ್ ಕುಮಾರ್ ಮತ್ತು ಅಮನ್ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ತನಿಖೆಗೆ ಆದೇಶಿಸಲಾಗಿದೆ.
ಘಟನೆಯ ನಂತರ, ಪ್ರದೇಶದಲ್ಲಿ ಉದ್ವಿಗ್ನತೆ ಹರಡಿತು. ಕೋಪಗೊಂಡ ಕುಟುಂಬ ಸದಸ್ಯರು ಶವವನ್ನು ರಸ್ತೆಯಲ್ಲಿ ಇರಿಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ರಸ್ತೆ ತಡೆ ನಡೆಸಿದರು. ಹನುಮಾನ್ ಧಾಮ್ ದಡದಲ್ಲಿರುವ ಬಗ್ಗು ಘಾಟ್‌ನಲ್ಲಿ ಕೆಲವು ಯುವಕರು ಜೂಜಾಡುತ್ತಿದ್ದರು.
ಯಾರೋ ಪೊಲೀಸರಿಗೆ ಮಾಹಿತಿ ನೀಡಿದರು. ಇಬ್ಬರು ಕಾನ್‌ಸ್ಟೆಬಲ್‌ಗಳು ತಕ್ಷಣ ಸ್ಥಳಕ್ಕೆ ಬಂದರು. ಪೊಲೀಸರನ್ನು ನೋಡಿದ ಯುವಕರು ಭಯಭೀತರಾದರು ಮತ್ತು ಐವರೂ ತಮ್ಮ ಜೀವ ಉಳಿಸಿಕೊಳ್ಳಲು ನದಿಗೆ ಹಾರಿದ್ರು.
ನಂತರ ಚೌಕ್ ಪೊಲೀಸ್ ಠಾಣೆಯ ಪೊಲೀಸರು ಮತ್ತು ಡೈವರ್‌ಗಳು ಸ್ಥಳಕ್ಕೆ ಬಂದರು. ಸುಮಾರು ಎರಡು ಗಂಟೆಗಳ ಪ್ರಯತ್ನದ ನಂತರ, ಡೈವರ್‌ಗಳು ತಿವಾರಿಯ ದೇಹವನ್ನು ಹೊರಕ್ಕೆ ತೆಗೆದರು.ಕೆರುಗಂಜ್ ನಿಂದ ಕಚಾರಿ ರಸ್ತೆಗೆ ಹೋಗುವ ರಸ್ತೆಯನ್ನು ತಡೆದು, ಅವರ ಶವವನ್ನು ಅಲ್ಲಿ ಇರಿಸಿದರು. ಪೊಲೀಸರು ಸಂಯವಹಿಸಿದ್ದರೆ, ಹಾಗೂ ಸ್ನೇಹಿತರು ಆತನನ್ನು ನದಿಗೆ ಹಾರದಂತೆ ತಡೆದಿದ್ದರೆ ಇದೆಲ್ಲಾ ನಡೆಯುತ್ತಲೇ ಇರಲಿಲ್ಲ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.