ಲೆಹೆಂಗಾ ಇಷ್ಟವಾಗದಿದ್ದಕ್ಕೆ ಕೋಪಗೊಂಡ ಭಾವಿ ಪತಿ: ಅಂಗಡಿ ಒಳಗೆ 32 ಸಾವಿರದ ಬಟ್ಟೆ ಚಾಕುವಿನಿಂದ ಹರಿದು ಹಾಕಿದ!

ಯುವಕನೋರ್ವ ತನ್ನ ಭಾವಿ ವಧುವಿಗೆ 32 ಸಾವಿರ ರೂಪಾಯಿಯ ಲೆಹಂಗಾವನ್ನು ಖರೀದಿಸಿದ್ದ. ಅದರೆ ವಧುವಿಗೆ ಅದು ಇಷ್ಟವಾಗಿಲ್ಲ. ಇದರಿಂದ ಬೇಜಾರಾದ ಆತ ಅದನ್ನು ಅಂಗಡಿಗೆ ವಾಪಸ್ ನೀಡಲು ಬಂದಿದ್ದಾನೆ. ಆದರೆ ಅಂಗಡಿ ಮಾಲೀಕರು ಎಕ್ಸ್‌ಚೇಂಜ್ ಮಾಡುವುದಕ್ಕೆ ಒಪ್ಪಿಲ್ಲ, ಇದರಿಂದ ಸಿಟ್ಟಿಗೆದ್ದ ಆತ ಚಾಕು ತೆಗೆದುಕೊಂಡು ವಾಪಸ್ ಅಂಗಡಿ ಬಂದಿದ್ದಾನೆ.

ನಂತರ ಆತ ಮಾಡಿದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಭಾರಿ ವೈರಲ್ ಆಗಿದೆ. ಹಾಗಿದ್ರೆ ಆತ ಮಾಡಿದ್ದೇನು?
ಮೇಘನಾ ಮಖಿಜಾ ಹಾಗೂ ಸುಮಿತ್ ಸಯಾನಿ ಎಂಬುವವರಿಗೆ ಮದುವೆ ನಿಶ್ಚಿತಾರ್ಥವಾಗಿತ್ತು, ಇಬ್ಬರು ಜೂನ್ 17ರಂದು ಅಂಗಡಿಯೊಂದಕ್ಕೆ ಬಂದು ಇಬ್ಬರು 32,300 ರೂಪಾಯಿ ಮೌಲ್ಯದ ಲೆಹೆಂಗಾವೊಂದನ್ನು ಖರೀದಿಸಿದ್ದರು. ಆದರೆ ಮನೆಗೆ ಹೋದ ಮೇಲೆ ವಧುವಿಗೆ ಲೆಹೆಂಗಾ ಇಷ್ಟವಾಗಿಲ್ಲ, ಇದರಿಂದ ಅವರು ಆ ಬಟ್ಟೆ ಅಂಗಡಿಗೆ ಕರೆ ಮಾಡಿ ಲೆಹೆಂಗಾ ಇಷ್ಟವಾಗಿಲ್ಲ, ಈ ಲೆಹೆಂಗಾವನ್ನು ಮರಳಿಸುತ್ತೇವೆ ಎಂದು ಹೇಳಿದ್ದಾರೆ.
ಆದರೆ ಬಟ್ಟೆ ಶಾಪ್‌ನವರು ಇದಕ್ಕೆ ಪ್ರತಿಯಾಗಿ ಹಣವನ್ನು ಪಾವತಿ ಮಾಡುವುದಕ್ಕೆ ಆಗುವುದಿಲ್ಲ, ಅದರ ಬದಲಾಗಿ ಕೂಪನ್ ಬೇಕಾದರೆ ಕೊಡಬಹುದು ಎಂದು ಈ ಭಾವಿ ವಧುವರರಿಗೆ ಮಾಹಿತಿ ನೀಡಿದ್ದಾರೆ. ಈ ಕ್ರೆಡಿಟ್ ಕೂಪನ್ ಪಡೆದು ಅದೇ ಅಂಗಡಿಯಲ್ಲಿ ಎರಡು ತಿಂಗಳ ಒಳಗೆ ಏನನ್ನಾದರೂ ಖರೀದಿಸಬಹುದು ಎಂದು ಅಂಗಡಿ ಸಿಬ್ಬಂದಿ ಆ ವಧು ವರಿಗೆ ಮಾಹಿತಿ ನೀಡಿದ್ದಾರೆ. ಇದಾಗಿ ಒಂದು ತಿಂಗಳ ನಂತರ ವಧು ಆ ಬಟ್ಟೆ ಶಾಪ್‌ಗೆ ಮತ್ತೆ ಬಂದಿದ್ದಾಳೆ.
ಆದರೆ ಅಂಗಡಿ ಸಿಬ್ಬಂದಿ ಪ್ರಸ್ತುತ ಸ್ಟಾಕ್ ಕ್ಲಿಯರೆನ್ಸ್ ಮಾರಾಟವನ್ನು ನಡೆಸುತ್ತಿದ್ದು, ಬ್ಯುಸಿಯಾಗಿರುವುದರಿಂದ ಮುಂದಿನ ತಿಂಗಳು ಬರುವುದಕ್ಕೆ ಹೇಳಿದ್ದಾರೆ. ಈ ವಿಚಾರವನ್ನು ಆಕೆ ಭಾವಿ ಪತಿಗೆ ಹೇಳಿದ್ದಾಳೆ. ಇದಾದ ನಂತರ ಆಕೆಯ ಭಾವಿ ಪತಿ ಅಂಗಡಿಗೆ ಬಂದು ಹಣ ನೀಡುವಂತೆ ಅಂಗಡಿ ಸಿಬ್ಬಂದಿಗೆ ಒತ್ತಾಯಿಸಿದ್ದಾನೆ. ಅದರೆ ಅಂಗಡಿಯವರು ನಿರಾಕರಿಸಿದಾಗ ಆತ ತಾನು ತಂದಿದ್ದ ಚಾಕುವನ್ನು ಅಂಗಡಿಯವರಿಗೆ ತೋರಿಸಿ ಬೆದರಿಸಿದ್ದಲ್ಲದೇ ಆ ದುಬಾರಿ ಲೆಹೆಂಗಾವನ್ನು ಅಲ್ಲೇ ತಾನು ತಂದ ಚಾಕುವಿನಿಂದ ಚುಚ್ಚಿ ಹರಿದು ಹಾಕಿದ್ದಾನೆ.
ಈ ದೃಶ್ಯ ಬಟ್ಟೆ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಕೋಪದ ಭರದಲ್ಲಿ ಕೃತ್ಯವೆಸಗಿದ್ದ ವರ ಸುಮಿತ್ ಸಯಾನಿಯನ್ನು ಪೊಲೀಸರು ಬಂಧಿಸಿ, ನಂತರ ಜಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಅಂದಹಾಗೆ ಮಹಾರಾಷ್ಟ್ರದ ಕಲ್ಯಾಣದಲ್ಲಿ ಈ ಘಟನೆ ನಡೆದಿದೆ.
ಕಲ್ಯಾಣದ ನಕ್ಷತ್ರ ಶೋ ರೂಮ್‌ನಲ್ಲಿ ಘಟನೆ ನಡೆದಿದ್ದು, ಸುಮಿತ್ ಸಯಾನಿ ಕೃತ್ಯದಿಂದ ಅಂಗಡಿಯಲ್ಲಿದ್ದ ಇತರ ಗ್ರಾಹಕರು ಭಯಭೀತರಾಗಿದ್ದರು. ಅಲ್ಲದೇ ಸುಮಿತ್ ಸಯಾನಿ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಅಲ್ಲದೇ ಅಂಗಡಿ ಬಗ್ಗೆ ಗೂಗಲ್‌ನಲ್ಲಿ ಕೆಟ್ಟದಾಗಿ ರಿವೀವ್ ಬರೆಯುತ್ತೇನೆ ಎಂದು ಬೆದರಿಸಿದ್ದ ಎಂದು ಅಂಗಡಿ ಮಾಲೀಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುಮಿತ್ ಸಯಾನಿ ತಾನು ಕೋಪದಲ್ಲಿ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ದೂರು ದಾಖಲಾದ ಬಜಾರ್ ಪೇತ್ ಪೊಲೀಸ್ ಠಾಣೆಯ ಇನ್ಸ್ಟ್‌ಪೆಕ್ಟರ್ ಸೂರಜ್ ಸಿಂಗ್ ಹೇಳಿದ್ದಾರೆ.
