ಕಸದ ಬುಟ್ಟಿಯಿಂದ ಐಷಾರಾಮಿ ಜೀವನ: 25 ಲಕ್ಷ ಮೌಲ್ಯದ ವಸ್ತು ಸಂಗ್ರಹಿಸಿದ ಮಹಿಳೆ

ನ್ಯೂಯಾರ್ಕ್: ಮನೆಯ ಕಸವನ್ನು, ತಮಗೆ ಬೇಡವಾದ ವಸ್ತುವನ್ನು ಜನರು ರೋಡ್ ಸೈಡ್ನಲ್ಲಿ ಎಸೆಯುವುದನ್ನು ನಾವು ನೋಡುತ್ತೇವೆ. ಕೆಲವೊಮ್ಮೆ ತಿಳಿಯದೆ ನಮಗೆ ಬೇಕಾಗಿರುವ ವಸ್ತುಗಳನ್ನು ಕೂಡ ಕಸದ ಜೊತೆ ಎಸೆಯುತ್ತೇವೆ.ಆದರೆ ಇಲ್ಲೊಂದು ಮಹಿಳೆ ಬೀದಿ ಬದಿಯ ಕಸದ ಬುಟ್ಟಿಯಿಂದ 25 ಲಕ್ಷ ರೂ.
ಮೌಲ್ಯದ ಐಷಾರಾಮಿ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಅವರು ಯಾರು? ಯಾಕೆ ಈ ಕೆಲಸ ಮಾಡುತ್ತಿದ್ದರು ಎಂದು ತಿಳಿದರೆ ನೀವು ಶಾಕ್ ಆಗುವುದು ಖಂಡಿತ! ಹಾಗಾದ್ರೆ ಅವರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ನ್ಯೂಯಾರ್ಕ್ ನಗರದ 35 ವರ್ಷದ ಮಹಿಳೆ ಅರಿಯಾನಾ ರೊಡ್ರಿಗಸ್ ಕಳೆದ ಆರು ತಿಂಗಳಿನಿಂದ ಕಸದ ಬುಟ್ಟಿಗಳು ಮತ್ತು ರಸ್ತೆ ಬದಿಯ ಕಸದ ಚೀಲಗಳನ್ನು ಹುಡಿಕಿ ಸುಮಾರು 25 ಲಕ್ಷ ರೂ. ಮೌಲ್ಯದ ಐಷಾರಾಮಿ ವಸ್ತುಗಳನ್ನು ಸಂಗ್ರಹಿಸಿದ್ದಾರೆ.
ಮೂರು ಮಕ್ಕಳ ತಾಯಿಯಾಗಿರುವ ರೊಡ್ರಿಗಸ್, 2022ರಲ್ಲಿ ‘ಏನನ್ನೂ ಖರೀದಿಸಬೇಡಿ’ ಎಂಬ ಸ್ಥಳೀಯ ಫೇಸ್ಬುಕ್ ಗುಂಪಿಗೆ ಸೇರಿದ ನಂತರ ಈ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ‘ಜನರು ಬೀದಿಯಿಂದ ವಸ್ತುಗಳನ್ನು ಎತ್ತಿಕೊಳ್ಳುವುದನ್ನು ನಾನು ನೋಡಲಾರಂಭಿಸಿದೆ ನಂತರ ನಾನು ಯೋಚಿಸಿದೆ, ನಾನೇಕೆ ಪ್ರಯತ್ನಿಸಬಾರದು?’ ಎಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ರೊಡ್ರಿಗಸ್ ಒಂದು ಸಣ್ಣ ವಿಂಟೇಜ್ ಮರುಮಾರಾಟ ವ್ಯವಹಾರವನ್ನು ನಡೆಸುತ್ತಿದ್ದು, ಅವರು ಇಟ್ಟುಕೊಳ್ಳದ ವಸ್ತುಗಳನ್ನು ದಾನ ಮಾಡುತ್ತಾರೆ ಅಥವಾ ಮಾರಾಟ ಮಾಡುತ್ತಾರೆ. ಇದರಿಂದ ಸಂಗ್ರಹಿಸಿದ ವಸ್ತುಗಳನ್ನು ನಾನು ನನ್ನ ಸ್ಥಳೀಯ ಚರ್ಚ್ಗೆ ಆಹಾರ, ಬಟ್ಟೆ ಮತ್ತು ಕಂಬಳಿಗಳಂತಹ ವಸ್ತುಗಳನ್ನು ನೀಡುತ್ತೇನೆ. ನಾನು ನನ್ನ ಮಕ್ಕಳಿಗಾಗಿ ಕಲೆ ಮತ್ತು ಕರಕುಶಲ ವಸ್ತುಗಳನ್ನು ಕೊಡುತ್ತೇನೆ ಎಂದು ಅವರು ಹೇಳಿದ್ದಾರೆ.
‘ಇದು ಪ್ರತಿ ಬಾರಿಯೂ ನಿಧಿ ಹುಡುಕಾಟದಂತೆ ಇರುತ್ತದೆ. ನನಗೆ ಈ ಕೆಲಸ ಇಷ್ಟವಾಗುತ್ತದೆ ಮತ್ತು ಒಳ್ಳೆಯ ವಸ್ತುಗಳು ಭೂಮಿಯಲ್ಲಿ ಸೇರುವುದನ್ನು ತಡೆಯಲು ನಾನು ನಿಜವಾಗಿಯೂ ಬಯಸುತ್ತೇನೆ ಎಂಬುದು ಅವರ ಅನಿಸಿಕೆಯಾಗಿದೆ. ರೊಡ್ರಿಗಸ್ ಸಂಗ್ರಹಿಸಿದ ವಸ್ತುಗಳಲ್ಲಿ 41,500 ರೂ. ಮೌಲ್ಯದ ಬರ್ಬೆರ್ರಿ ಕೋಟ್, 74,700ರೂ.ಮೌಲ್ಯದ ಪ್ರಾಡಾ ಶೂಗಳು , 2.5 ಲಕ್ಷದಿಂದ 8.3 ಲಕ್ಷಕ್ಕೂ ಹೆಚ್ಚು ಮೌಲ್ಯದ ಸೋಹ್ಮರ್ ಮತ್ತು ಕೋ ಪಿಯಾನೋ ಸೇರಿವೆ ಎಂದು ತಿಳಿಸಿದ್ದಾರೆ.
ಜೊತೆಗೆ ಅವಳು ಅಪಾರ್ಟ್ಮೆಂಟ್ಗಳನ್ನು ತೆರವುಗೊಳಿಸುವ ಸ್ಥಳಗಳಿಗೂ ಹೋಗುತ್ತಿದ್ದು, ಜನರು ಎಸೆಯುವ ಪೀಠೋಪಕರಣಗಳು, ಕನ್ನಡಿಗಳು, ನೈಟ್ಸ್ಟ್ಯಾಂಡ್ಗಳು, ಚಿನ್ನದ ಆಭರಣಗಳನ್ನು ಕೂಡ ಪತ್ತೆ ಹಚ್ಚುತ್ತಾರೆ.
ನಾನು ಮಾಡುವ ಕೆಲಸ ಕೆಲವು ಜನರಿಗೆ ಇಷ್ಟವಾಗುವುದಿಲ್ಲ. ಆದರೆ ನಾನು ಈ ರೀತಿ ಇಷ್ಟೊಂದು ವಸ್ತುಗಳನ್ನು ವ್ಯರ್ಥ ಮಾಡುವುದು ಮತ್ತು ಹೊಸ ವಸ್ತುಗಳನ್ನು ಖರೀದಿಸುವುದನ್ನು ಮುಂದುವರಿಸುವುದು ಸರಿಯಲ್ಲ ಎಂಬುದನ್ನು ತಿಳಿಯುತ್ತೇನೆ ಎಂದು ಅರಿಯಾನಾ ರೊಡ್ರಿಗಸ್ ತಮ್ಮ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ