ಭಾರತದ ನೆಲದಿಂದ ಪಾಕ್‌ಗೆ ತಾಲಿಬಾನ್ ಸಲಹೆ: “ನಾವು ಭಯೋತ್ಪಾದಕರನ್ನು ನಿರ್ನಾಮ ಮಾಡಿದ್ದೇವೆ, ಪಾಕಿಸ್ತಾನವೂ ಶಾಂತಿಯ ಮಾರ್ಗ ಅನುಸರಿಸಲಿ”

ನವದೆಹಲಿ: ಭಯೋತ್ಪಾದಕ ಗುಂಪುಗಳನ್ನು ಅಫ್ಘಾನಿಸ್ತಾನ ನಿರ್ನಾಮ ಮಾಡಿದೆ. ಪಾಕಿಸ್ತಾನ ಕೂಡ ಅದೇ ಶಾಂತಿಯ ಮಾರ್ಗವನ್ನು ಅನುಸರಿಸಬೇಕು ಎಂದು ಭಾರತದ ನೆಲದಿಂದ ಪಾಕ್‌ಗೆ ತಾಲಿಬಾನ್ (Taliban) ಸಲಹೆ ನೀಡಿದೆ.

ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಶುಕ್ರವಾರ ಭಾರತಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ, ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ನಂತಹ ಭಯೋತ್ಪಾದಕ ಗುಂಪುಗಳು ಅಫ್ಘಾನ್ ನೆಲದಿಂದ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿವೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ತಾಲಿಬಾನ್ ಎಲ್ಲಾ ಭಯೋತ್ಪಾದಕರನ್ನು ನಿರ್ನಾಮ ಮಾಡಿದೆ ಎಂದು ಮುತ್ತಕಿ ತಿಳಿಸಿದ್ದಾರೆ.
ಭಯೋತ್ಪಾದಕರಲ್ಲಿ ಒಬ್ಬರೂ ಅಫ್ಘಾನಿಸ್ತಾನದಲ್ಲಿಲ್ಲ. ಅಫ್ಘಾನಿಸ್ತಾನದಲ್ಲಿ ಒಂದು ಇಂಚು ಭೂಮಿಯೂ ಅವರ ನಿಯಂತ್ರಣದಲ್ಲಿಲ್ಲ. ನಾವು (2021 ರಲ್ಲಿ) ಕಾರ್ಯಾಚರಣೆ ನಡೆಸಿದ ಅಫ್ಘಾನಿಸ್ತಾನವು ಬದಲಾಗಿದೆ ಎಂದು ಪಾಕಿಸ್ತಾನಿ ಭಯೋತ್ಪಾದಕ ಗುಂಪುಗಳು ಈ ಹಿಂದೆ ಅಫ್ಘಾನ್ ಮಣ್ಣನ್ನು ಕಾರ್ಯಾಚರಣೆಗೆ ಬಳಸುತ್ತಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಮುತ್ತಕಿ ಪ್ರತಿಕ್ರಿಯಿಸಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆಯ ಬಲಿಪಶುವಾಗಿರುವ ಭಾರತೀಯ ನೆಲದಿಂದ ಅವರು ಪಾಕಿಸ್ತಾನಕ್ಕೆ ಮುತ್ತಕಿ ಒಂದು ಸಂದೇಶವನ್ನು ನೀಡಿದ್ದಾರೆ. ‘ಶಾಂತಿಗಾಗಿ ಅಫ್ಘಾನಿಸ್ತಾನ ಮಾಡಿದಂತೆ ಇತರ ದೇಶಗಳು ಸಹ ಅಂತಹ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದು ಕರೆ ನೀಡಿದ್ದಾರೆ.