ಸ್ನೇಹಿತನ ಹತ್ಯೆ ಪ್ರಕರಣ – ಮುಖೇಶ್ ಮಂಡಲ್ ಶವ STP ಟ್ಯಾಂಕ್‌ನಲ್ಲಿ ಪತ್ತೆ, ಆರೋಪಿ ಲಕ್ಷ್ಮಣ್ ಮಂಡಲ್ ಬಂಧನ

ಮಂಗಳೂರು : ಮುಕ್ಕಾ ರೋಹನ್ ಎಸ್ಟೇಟ್ ಲೇಔಟ್ ನಲ್ಲಿ ನಾಪತ್ತೆಯಾಗಿದ್ದ ಕಾರ್ಮಿಕನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಸ್ನೇಹಿತನ ಕೊಲೆ ಮಾಡಿ ಒಳಚರಂಡಿ ಸಂಸ್ಕರಣಾ ಟ್ಯಾಂಕ್ ಗೆ ಬಿಸಾಕಿದ್ದ ಆರೋಪಿಯನ್ನು ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಲ ನಿವಾಸಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮುಖೇಶ್ ಮಂಡಲ್, ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರತುವಾದ ಪರಂಪುರದ ಭೂದೇವ್ ಮಂಡಲ್ ಅವರ ಪುತ್ರ. ಅವರು ಸುರತ್ಕಲ್‌ನ ಮುಕ್ಕದಲ್ಲಿರುವ ರೋಹನ್ ಎಸ್ಟೇಟ್ ಎಂಬ ಲೇಔಟ್‌ನಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮುಖೇಶ್ ಮಂಡಲ್ ಜೂನ್ 24 ರಂದು ನಾಪತ್ತೆಯಾಗಿದ್ದರು. ಈ ಕುರಿತಂತೆ ಜುಲೈ 2 ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ಅಗಸ್ಟ್ 21ರಂದು ಬೆಳಿಗ್ಗೆ 10 ಗಂಟೆಗೆ ಮುಖೇಶ್ ಮಂಡಲ್ ಮೃತದೇಹವು STP ಟ್ಯಾಂಕ್ ಒಳಗೆ ಕೊಳೆತು ಸ್ಥಿತಿಯಲ್ಲಿ ಪತ್ತೆಯಾಗಿದೆ.
ತನಿಖೆಯಲ್ಲಿ ಮುಖೇಶ್ ಮಂಡಲ್ ನನ್ನು ಅಲ್ಲಿಯೇ ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಮಂಡಲ್ ಎಂಬಾತ ಕೊಲೆ ಮಾಡಿ STP ಟ್ಯಾಂಕ್ ಗೆ ಹಾಕಿ, ಪ್ಲೈವುಡ್ ಶೀಟ್ ಹಾಕಿ ಮುಚ್ಚಿ ಕೊಲೆಯನ್ನು ಮರೆ ಮಾಚಿರುವ ಬಗ್ಗೆ ಚೇತನ್ ಎಂಬವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಪತ್ತೆಗಾಗಿ ಪಿಎಸ್.ಐ ಶಶಿಧರ ಶೆಟ್ಟಿ ಹಾಗೂ ಎಎಸ್.ಐ ರಾಜೇಶ್ ಆಳ್ವ ಅವರಿದ್ದ ತಂಡವನ್ನು ರಚಿಸಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಲಾಗಿತ್ತು. ಪಿಎಸ್ಐ ಶಶಿಧರ ಶೆಟ್ಟಿ ಅವರ ತಂಡ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿದ್ದ ಆರೋಪಿ ಲಕ್ಷ್ಮಣ್ ಮಂಡಲ್ ನನ್ನು ಬಂಧಿಸಿ ಕರೆತಂದಿದೆ.
ಜೂನ್ 24ರಂದು ರಾತ್ರಿ 9 ಗಂಟೆಗೆ ಮುಕ್ಕದ ರೋಹನ್ ಎಸ್ಟೇಟ್ ಲೇಔಟ್ ನಲ್ಲಿ ನಿರ್ಮಾಣ ಹಂತದ ಕಟ್ಟಡದೊಳಗೆ ಲಕ್ಷ್ಮಣ್ ಮಂಡಲ್ ಹಾಗೂ ಮುಖೇಶ್ ಮಂಡಲ್ ಮದ್ಯಪಾನವನ್ನು ಮಾಡುತ್ತಿದ್ದರು. ಈ ವೇಳೆ, ಮುಕೇಶ್ ಆರೋಪಿ ಲಕ್ಷ್ಮಣ್ ಪತ್ನಿಯ ಅಶ್ಲೀಲ ವೀಡಿಯೋಗಳನ್ನು ಸಂಗ್ರಹಿಸಿ ತನ್ನ ಮೊಬೈಲ್ ನಲ್ಲಿ ತೋರಿಸಿದ್ದ. ಇದರಿಂದ ಕೋಪಗೊಂಡ ಆರೋಪಿ ಪಕ್ಕದ ರೂಮಿನಲ್ಲಿದ್ದ ಕಬ್ಬಿಣದ ಸರಳನ್ನು ತಂದು ತಲೆಗೆ ಹೊಡೆದು ಕೊಲೆ ಮಾಡಿದ್ದು ಕೊಲೆಯನ್ನು ಮರೆ ಮಾಚಲು ಶವವನ್ನು ಅಲ್ಲಿಯೇ ಇದ್ದ STP ಟ್ಯಾಂಕ್ ನೊಳಗೆ ಹಾಕಿರುವುದಾಗಿ ತಪ್ಪೊಪ್ಪಿದ್ದಾನೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಯನ್ನು 5 ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿ ಲಕ್ಷ್ಮಣ್ ಮಂಡಲ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯದ ರತುವಾ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣ ದಾಖಲಾಗಿದೆ.
