Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಖೊಟ್ಟಿ ದಾಖಲೆ ಸೃಷ್ಟಿಸಿ ₹25 ಲಕ್ಷಕ್ಕೆ ನಿವೇಶನ ಮಾರಾಟ: ನಾಲ್ವರ ವಿರುದ್ಧ ಪ್ರಕರಣ ದಾಖಲು

Spread the love

ಕಲಬುರಗಿ: ತಮ್ಮ ಹೆಸರಿಗೇ ಇಲ್ಲದ ನಿವೇಶನದ ಖೊಟ್ಟಿ ದಾಖಲಾತಿಗಳನ್ನು ತಯಾರಿಸಿದ ನಾಲ್ವರ ತಂಡ ಆ ನಿವೇಶನವನ್ನು ವ್ಯಕ್ತಿಯೊಬ್ಬರಿಗೆ ಮಾರಿ ವಂಚಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಶಾಹಬಜಾರ್‌ ಪ್ರದೇಶದ ನಿವಾಸಿ ಗುರುಲಿಂಗಯ್ಯ ಹಿರೇಮಠ ವಂಚನೆಗೆ ಒಳಗಾದವರು.

ಲಿಂಗರಾಜ ಹೊದಲೂರ ಹಾಗೂ ನಾಗರಾಜ ಹೊದಲೂರ ಸಹೋದರರು ತಮ್ಮದು ಎಂದು ಹೇಳಿಕೊಂಡು ಒಂದು ನಿವೇಶನವನ್ನು ನನಗೆ ₹25 ಲಕ್ಷಕ್ಕೆ ಮಾರಿದರು. ಅದನ್ನು ಖರೀದಿಸಲು ಬ್ಯಾಂಕ್‌ ಸಾಲಕ್ಕಾಗಿ ಅವರೇ ಆಧಾರ್‌ ಹೌಸಿಂಗ್ ಫೈನಾನ್ಸ್‌ಗೆ ಕರೆದೊಯ್ದು ಅಲ್ಲಿ ಮ್ಯಾನೇಜರ್‌ ಶ್ರೀಕಾಂತ ರೆಡ್ಡಿ, ಫೀಲ್ಡ್‌ ಆಫೀಸರ್‌ ರಮೇಶ ಅವರನ್ನು ಪರಿಚಯಿಸಿದರು. ಬಳಿಕ ಎಲ್ಲ ದಾಖಲೆ ನಾವೇ ಸಿದ್ಧಪಡಿಸುವುದಾಗಿ ಹೇಳಿ ನಾಲ್ವರೂ ಸೇರಿ ಐಸಿಐಸಿಐ ಬ್ಯಾಂಕ್‌ನ ಐದು ಸಹಿ ಮಾಡಿದ ಚೆಕ್‌ ಪಡೆದರು. ನಂತರ ಎಲ್ಲಾ ಲೋನ್ ದಾಖಲಾತಿಗಳ ಮೇಲೆ ಸಹಿ ಪಡೆದು 2023ರ ಮಾರ್ಚ್‌ 18ರಂದು ನಿವೇಶನ ನನ್ನ ಹೆಸರಿಗೆ ನೋಂದಣಿ ಮಾಡಿಸಿದರು. ಆಗ ಲಿಂಗರಾಜ ಹೆಸರಿಗೆ ಎಕ್ಸಿಸ್ ಬ್ಯಾಂಕ್ ಚೆಕ್ ₹17.29 ಲಕ್ಷ ನೀಡಿದರು. ನಾನು ನಿವೇಶನಕ್ಕೆ ಸಂಬಂಧಿಸಿದ ಇತರೆ ದಾಖಲಾತಿಗಳನ್ನು ಮತ್ತು ಫೈನಾನ್ಸ್‌ನ ಪ್ಯಾನೆಲ್ ಅಡ್ವೊಕೇಟ್‌ ನೀಡಿದ ಕಾನೂನು ಅಭಿಪ್ರಾಯ ಕೇಳಿದರೂ ಕೊಡಲಿಲ್ಲ. ನಾಲ್ವರೂ ಸೇರಿಕೊಂಡು ತಮ್ಮ ಹೆಸರಿಗೆ ಇಲ್ಲದ ನಿವೇಶನದ ಖೊಟ್ಟಿ ದಾಖಲಾತಿಗಳನ್ನು ತಯಾರಿಸಿ ನನಗೆ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ಗುರುಲಿಂಗಯ್ಯ ತಿಳಿಸಿದ್ದಾರೆ.

ಈ ಕುರಿತು ನಾಲ್ವರ ವಿರುದ್ಧ ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಲದಲ್ಲಿದ್ದಾಗ ಮಂಗಳಸೂತ್ರ ಕಿತ್ತು ಪರಾರಿ

ಕಲಬುರಗಿ ತಾಲ್ಲೂಕಿನ ತಾಡತೆಗನೂರು ಗ್ರಾಮ ವ್ಯಾಪ್ತಿಯ ಜಮೀನಿನಲ್ಲಿ ಟೊಮೊಟೊ ಹಣ್ಣು ಕೊಯ್ಲು ಮಾಡುತ್ತಿದ್ದ ಮಹಿಳೆಯೊಬ್ಬರ ₹80 ಸಾವಿರ ಮೌಲ್ಯದ ಬಂಗಾರದ ಮಂಗಳಸೂತ್ರವನ್ನು ಬುರ್ಖಾಧಾರಿ ವ್ಯಕ್ತಿ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಬುರಗಿ ತಾಲ್ಲೂಕಿನ ಕಡಣಿ ಗ್ರಾಮದ ನಿವಾಸಿ ಕಲ್ಪನಾ ಅಂತರಂಗಿ ಚಿನ್ನಾಭರಣ ಕಳೆದುಕೊಂಡ ಮಹಿಳೆ.

‘ಸೆಪ್ಟೆಂಬರ್‌ 8ರಂದು ಮಧ್ಯಾಹ್ನ ನಮ್ಮ ತಾಯಿ ಹೊಲದಲ್ಲಿ ಒಬ್ಬರೇ ಟೊಮೆಟೊ ಕೊಯ್ಲು ಮಾಡುತ್ತಿದ್ದರು. ಆಗ ಹಿಂದಿನಿಂದ ಬಂದ ಬುರ್ಖಾಧಾರಿಯೊಬ್ಬ ನಮ್ಮ ತಾಯಿ ಕೊರಳಲ್ಲಿದ್ದ 12 ಗ್ರಾ ಬಂಗಾರದ ಮಂಗಳ ಸೂತ್ರ ದೋಚಿಕೊಂಡು ಓಡಿಹೋಗಿದ್ದಾನೆ’ ಎಂದು ಕಲ್ಪನಾ ಅವರ ಪುತ್ರ ಶಿವರಾಜ ಅಂತರಂಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಫರಹತಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನಲ್ಲಿ ಇಟ್ಟಿದ್ದ ಲ್ಯಾಪ್‌ಟಾಪ್‌ ಕಳವು

ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ನಿಲ್ಲಿಸಿದ್ದ ಆಳಂದ ತಾಲ್ಲೂಕಿನ ನಿಂಬಾಳ ಗ್ರಾಮದ ಪಿಡಿಒ ಅವರಿಗೆ ಸೇರಿದ ಕಾರಿನ ಹಿಂಬದಿ ಬಾಗಿಲಿನ ಗಾಜು ಒಡೆದು ಲ್ಯಾಪ್‌ಟಾಪ್‌ ಹಾಗೂ ಪಿಡಿಒ ಡಿಜಿಟಲ್‌ ಸಹಿ ಪ್ರಮಾಣ ಪತ್ರವಿರುವ ಪೆನ್‌ಡ್ರೈವ್‌ ಕದಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದ ನಿವಾಸಿ, ನಿಂಬಾಳ ಪಿಡಿಒ ಗುರುನಾಥ ಧೊಂಡಿಬಾ ದೂರು ನೀಡಿದ್ದಾರೆ. ಅದರನ್ವಯ ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹30 ಸಾವಿರ ಜಪ್ತಿ

ಕಲಬುರಗಿಯ ಮಹಾದೇವ ನಗರ ಕಾಲೊನಿಯ ಸಂಕಣ್ಣಿ ಮಸೀದಿ ಸಮೀಪದಲ್ಲಿ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ ಜನರ ಮೇಲೆ ದಾಳಿ ನಡೆಸಿರುವ ಪೊಲೀಸರು ಕ್ರಮಕೈಗೊಂಡಿದ್ದಾರೆ. ದಾಳಿ ವೇಳೆ ಆರೋಪಿಗಳಿಂದ ₹30,100 ನಗದು ಜಪ್ತಿ ಮಾಡಿದ್ದಾರೆ.

ಈ ಕುರಿತು 13 ಮಂದಿ ವಿರುದ್ಧ ಚೌಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *