ಭವಿಷ್ಯ ಹೇಳುವ ನೆಪದಲ್ಲಿ ವಂಚನೆ: ಐವರು ನಕಲಿ ಬಾಬಾಗಳ ಬಂಧನ

ಚಿತ್ರದುರ್ಗ : ಭವಿಷ್ಯ ಹೇಳುವ ನೆಪದಲ್ಲಿ ವ್ಯಕ್ತಿಯೊಬ್ಬರ ಚಿನ್ನದ ಉಂಗುರ ಲಪಟಾಯಿಸಿ ಪರಾರಿಯಾಗಿದ್ದ ಐವರು ನಕಲಿ ಬಾಬಾಗಳನ್ನು ಚಿತ್ರದುರ್ಗದ (Chitradurga) ಪೊಲೀಸರು ಬಂಧಿಸಿದ್ದಾರೆ. ಈ ಐವರೂ ದುಷ್ಕರ್ಮಿಗಳು ಮಧ್ಯಪ್ರದೇಶ ಮೂಲದವರೆಂದು ತಿಳಿದುಬಂದಿದ್ದು, ಸಾಧುಗಳ ವೇಷ ಧರಿಸಿ ಇದೇ ರೀತಿ ಕೃತ್ಯವನ್ನೆಸಗುತ್ತಿದ್ದರೆಂದು ತಿಳಿದು ಬಂದಿದೆ.

ಕಮಲನಾಥ್ ,ಸಂತೋಷ ನಾಥ್, ಚೈನ್ ನಾಥ್ ಚೌಹಾಣ್, ಶ್ರವಣ್ ಜೋಗಿ ಮತ್ತು ಟೋನಿಯಾ ಬಂಧಿತ ಆರೋಪಿಗಳು.
ರವಿಕುಮಾರ್ ಎಂಬ ರೈತರೊಬ್ಬರು ಚಿತ್ರದುರ್ಗದ ಚಿಕ್ಕಗೊಂಡನ ಹಳ್ಳಿಯ ಬಳಿ ಹೆದ್ದಾರಿಯಲ್ಲಿ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಈ ನಕಲಿ ಸಾಧುಗಳ ಗ್ಯಾಂಗ್ ಭವಿಷ್ಯ ಹೇಳುವುದಾಗಿ ನುಡಿದು ಬಲವಂತವಾಗಿ ತಮ್ಮ ಕಾರಿನಲ್ಲಿ ಕೂರಿಸಿಕೊಂಡಿದ್ದರು. ಬಳಿಕ ಅವರ ಕೈಲಿದ್ದ ಚಿನ್ನದ ಉಂಗುರವನ್ನು ಕಸಿದು ತಮ್ಮ ಬಾಯಲ್ಲಿ ಹಾಕಿಕೊಂಡು ಅವರನ್ನು ಕಾರಿನಿಂದ ಹೊರಗೆ ತಳ್ಳಿ ಪರಾರಿಯಾಗಿದ್ದರು.
ರವಿಕುಮಾರ್ ನೇರವಾಗಿ ತುರುವನೂರು ಪೊಲೀಸ್ ಠಾಣೆಗೆ ತೆರಳಿ ಇವರ ವಿರುದ್ದ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಗಿದ್ದಾರೆ. ಇವರಲ್ಲಿ ನಾಲ್ವರು ಸಾಧುಗಳಂತೆ ವೇಷ ಧರಿಸಿ ವಂಚಿಸುತ್ತಿದ್ದು, ಟೋನಿಯಾ ಇವರ ಕಾರು ಚಾಲಕನಾಗಿದ್ದ ಎಂದು ತಿಳಿದುಬಂದಿದೆ.