ರಿಸರ್ವ್ ಬ್ಯಾಂಕ್ ಹೆಸರಿನಲ್ಲಿ ವಂಚನೆ: ₹30 ಲಕ್ಷದ ಆಮಿಷಕ್ಕೆ ಬಿದ್ದು ₹3.71 ಲಕ್ಷ ಕಳೆದುಕೊಂಡ ಮಹಿಳೆ

ಶಿವಮೊಗ್ಗ: ನಗರದ (Shivamogga) ಮಹಿಳೆಯೊಬ್ಬರು 30 ಲಕ್ಷ ರೂ. ಬಹುಮಾನದ ಆಸೆಗೆ 3,71,400 ರೂ. ಕಳೆದುಕೊಂಡಿದ್ದಾರೆ. ಟ್ಯಾಂಕ್ ಮೊಹಲ್ಲಾದ ನಿವಾಸಿಯಾದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಡಿಪಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಲೋಗೋ ಹಾಕಿಕೊಂಡು, ಈ ವಂಚನೆ ಮಾಡಿದ್ದಾನೆ.

ಅಪರಿಚಿತ ವ್ಯಕ್ತಿ, ವಾಟ್ಸ್ಯಾಪ್‌ನಲ್ಲಿ ತಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಸಂದೇಶ ಕಳುಹಿಸಿ, ನೀವು 30 ಲಕ್ಷ ರೂ. ಬಹುಮಾನ ಗೆದ್ದಿದ್ದೀರಿ ಎಂದು ನಂಬಿಸಿದ್ದಾನೆ. ಈ ಸಂದೇಶದಿಂದ ಸಂತೋಷಗೊಂಡ ಮಹಿಳೆ ಆತನ ಮಾತನ್ನು ನಂಬಿದ್ದಾರೆ. ನಂತರ, “ನಿಮ್ಮ ಖಾತೆಗೆ ಬಹುಮಾನದ ಹಣವನ್ನು (Money) ವರ್ಗಾಯಿಸಲು ಖಾತೆ ಸಂಖ್ಯೆಯನ್ನು ನೀಡಿ” ಎಂದು ವಂಚಕ ಹೇಳಿ ಮಹಿಳೆಯಿಂದ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಪಡೆದಿದ್ದಾನೆ. ಇದನ್ನೂ ಓದಿ: ನಿನ್ನ ಬೆತ್ತಲೆ ಫೋಟೋ ಲೀಕ್ ಮಾಡ್ತೀನಿ – ಬೆದರಿಕೆ ಹಾಕಿ ಟಿಕ್ಕಿಯಿಂದ 65 ಲಕ್ಷ ರೂ. ಪೀಕಿದ ಸ್ನೇಹಿತ
ಅಕೌಂಟ್ ನಂಬರ್ ಪಡೆದು, ಖಾತೆಗೆ ಲಾಟರಿ ಹಣ ವರ್ಗಾವಣೆ ಮಾಡಬೇಕಾದರೆ, ಅದಕ್ಕೆ ಸರ್ವಿಸ್ ಶುಲ್ಕ, ತೆರಿಗೆ ಮತ್ತು ಇತರೆ ಕಾರಣಗಳನ್ನು ನೀಡಬೇಕು ಎಂದು ಒಟ್ಟು 3,71,400 ರೂ. ಹಣವನ್ನು ಹಂತ ಹಂತವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ವಂಚನೆಗೆ ಒಳಗಾಗಿರುವುದು ಅರಿವಾದ ಮೇಲೆ ಮಹಿಳೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಹೆಸರಿನಲ್ಲಿ ನಟಿಯ ತಾಯಿ ಬಳಿ ಹಣ ಪೀಕಿದ ವ್ಯಕ್ತಿ
