ಕೆಡಿಪಿ ಸಭೆಯಲ್ಲಿ ರಮ್ಮಿ ಆಡಿದ ಅರಣ್ಯಧಿಕಾರಿ

ರಾಯಚೂರು: ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಅಧಿಕಾರಿಯೊಬ್ಬರು ಮೊಬೈಲ್‌ನಲ್ಲಿ ರಮ್ಮಿ ಆಡುತ್ತಿದ್ದ ಘಟನೆ (Raichur News) ಶುಕ್ರವಾರ ನಡೆದಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಅವರು ಸಭಾಂಗಣದಲ್ಲೇ ಕುಳಿತು ಮೊಬೈಲ್‌ನಲ್ಲಿ ರಮ್ಮಿ ಆಡುತ್ತಿದ್ದರು.
ಇದನ್ನು ಗಮನಿಸಿದ ಒಬ್ಬರು ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಈ ಘಟನೆ ನಡೆದಿದೆ. ಈ ವಿಷಯ ಸಚಿವರ ಗಮನಕ್ಕೆ ಬರುತ್ತಿದ್ದಂತೆಯೇ ಅವರನ್ನು ಸಭೆಯಿಂದ ಹೊರಗೆ ಕಳುಹಿಸಿದ್ದು, ಡಿಸಿಎಫ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಸಭೆ ಸಮಯದಲ್ಲಿ ಇಂತಹ ಆಟವಾಡುವುದು ಕ್ಷಮಾರ್ಹವಲ್ಲ. ಪ್ರಾಮಾಣಿಕತೆಗೆ ಬದ್ಧರಾಗದ ಅಧಿಕಾರಿಗಳಿಗೆ ಯಾವುದೇ ಸಹಿಷ್ಣುತೆ ಇಲ್ಲ. ಮುಂದಿನ ಸಭೆಗಳಲ್ಲಿ ಇಂತಹ ಘಟನೆ ಪುನರಾವರ್ತನೆ ಆಗಬಾರದು ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತೀವ್ರ ಎಚ್ಚರಿಕೆ ನೀಡಿದ್ದಾರೆ.
ನೀವು ಗಂಭೀರವಾಗಿಲ್ಲ, ಅಧಿಕಾರಿಗಳು ಗಂಭೀರವಾಗಿಲ್ಲ. ಕನಿಷ್ಠ ಪಕ್ಷ ಶಾಸಕರ ಗೌರವವನ್ನಾದರೂ ಉಳಿಸಿ ಎಂದು ಶಾಸಕರು, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೇ ಈ ವಿಡಿಯೊ ತೆಗೆಯಲಾಗಿದೆ.
