ಭಾರತದ ಸೌಂದರ್ಯಕ್ಕೆ ವಿದೇಶಿ ವ್ಲಾಗರ್ ಮೆಚ್ಚುಗೆ: ಪೋಸ್ಟ್ ವೈರಲ್

ಸಾಮಾನ್ಯವಾಗಿ ಭಾರತಕ್ಕೆ ಬರುವ ವಿದೇಶಿಗರು ಅಲ್ಲಲ್ಲಿ ಎದ್ದು ಕಾಣುವ ಕಸದ ರಾಶಿ, ಮೂಲಸೌಕರ್ಯದ ಕೊರತೆ, ಜನದಟ್ಟಣೆ ಹಾಗೂ ಕೊಳಗೇರಿ ಪ್ರದೇಶಗಳು ಹಾಗೂ ನಾಗರಿಕ ಪ್ರಜ್ಞೆಯೇ ಇಲ್ಲದೇ ವರ್ತಿಸುವ ಜನರ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಒಳ್ಳೆಯ ವಿಷಯಗಳನ್ನು ಹುಡುಕುವ ಈ ವಿದೇಶಿಗನ ಮನಸ್ಸು ನಿಜಕ್ಕೂ ದೊಡ್ಡದು. ಭಾರತಕ್ಕೆ ಬಂದಿರುವ ವಿದೇಶಿ ವ್ಲಾಗರ್ ಭಾರತದ (India) ಈ ಪ್ರದೇಶವು ಎಷ್ಟು ಸುಂದರವಾಗಿದೆ ಎಂದು ಹಾಡಿ ಹೊಗಳಿದ್ದಾನೆ. ಒಳ್ಳೆಯ ವಿಷಯಗಳನ್ನು ಹುಡುಕುವ ಈ ವಿದೇಶಿಗನ ಒಳ್ಳೆತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

@LogicalIndian ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಬ್ರ್ಯಾಂಡೆಡ್ ಮಳಿಗೆಗಳಿರುವ ಬೀದಿಗಳಲ್ಲಿ ವಿದೇಶಿಗ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಇಲ್ಲಿನ ಸುತ್ತಮುತ್ತಲಿನ ಸ್ಥಳಗಳನ್ನು ತೋರಿಸುತ್ತಾ, ಈ ಸ್ಥಳವು ತುಂಬಾನೇ ಚೆನ್ನಾಗಿದೆ. ಒಂದೇ ಒಂದು ಕಸ ಕಾಣಲು ಸಿಗಲ್ಲ, ಜನದಟ್ಟಣೆ ಇಲ್ಲವೇ ಇಲ್ಲ ಎಂದು ಹೇಳಿದ್ದಾನೆ.
ಆಗಸ್ಟ್ 21 ರಂದು ಶೇರ್ ಮಾಡಲಾದ ಈ ವಿಡಿಯೋವನ್ನು ಹಲವು ಮಂದಿ ವೀಕ್ಷಿಸಿದ್ದು, ಬಳಕೆದಾರರು ಒಳ್ಳೆಯದ್ದನ್ನು ಹುಡುಕುವ ವಿದೇಶಿಗನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ ತಪ್ಪುಗಳನ್ನು ಎತ್ತಿ ತೋರಿಸುವ ಮನಸ್ಥಿತಿಗಳ ನಡುವೆ ನಿಮ್ಮಂತ ವ್ಯಕ್ತಿಗಳು ಇರುವುದೇ ಅಪರೂಪ ಎಂದಿದ್ದಾರೆ. ಮತ್ತೊಬ್ಬರು ಭಾರತದ ಎಲ್ಲಾ ಹಾದಿ ಬೀದಿಗಳು ಈ ರೀತಿ ಇರಲು ಸಾಧ್ಯವಿಲ್ಲ. ವಾಸ್ತವತೆಯನ್ನು ದೂರವಿಟ್ಟು ಒಂದು ಸಣ್ಣ ಸ್ಥಳವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಭಾರತವು ನಿಜಕ್ಕೂ ಉತ್ತಮವಾಗಿದೆ, ಒಳ್ಳೆಯದ್ದನ್ನು ಹುಡುಕುವ ಮನಸ್ಸಿರಬೇಕು ಅಷ್ಟೇ ಎಂದು ಹೇಳಿದ್ದಾರೆ.