ಬೆಂಗಳೂರಿನ ಬಾಡಿಗೆ ದರಕ್ಕೆ ವಿದೇಶಿ ಪ್ರಜೆ ದಂಗು: “ವಿಶ್ವದ ಅತ್ಯಂತ ದುರಾಸೆಯ ಮಾಲೀಕರು ಬೆಂಗಳೂರಿನಲ್ಲಿದ್ದಾರೆ!”

ಬೆಂಗಳೂರು: ಜಾಗತಿಕ ರಿಯಲ್ ಎಸ್ಟೇಟ್ ವಿಭಾಗದಲ್ಲಿ ದುಬಾರಿ ನಗರಗಳ ಪಟ್ಟಿಯಲ್ಲಿ ಬರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಯೊಂದರ ಮಾಸಿಕ ಬಾಡಿಗೆ 2.3 ಲಕ್ಷ ಮತ್ತು 23 ಲಕ್ಷ ರೂ ಅಡ್ವಾನ್ಸ್..

ಅಚ್ಚರಿಯಾದ್ರೂ ಇದು ಸತ್ಯ.. ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲು ಹೋಗಿದ್ದ ವಿದೇಶಿ ಪ್ರಜೆಯೊಬ್ಬ ಇಲ್ಲಿನ ದರಗಳನ್ನು ಕೇಳಿ ಹೌಹಾರಿದ್ದಾರೆ.
ಮನೆ ಹುಡುಕುತ್ತಿದ್ದ ವಿದೇಶಿ ವ್ಯಕ್ತಿ ಬಾಡಿಗೆ ಮತ್ತು ಡೆಪಾಸಿಟ್ ನೋಡಿ ದಂಗಾಗಿದ್ದಾರೆ. ಅಲ್ಲದೆ ವಿಶ್ವದಲ್ಲೇ ಅತೀ ದುರಾಸೆ ಮಾಲೀಕರು ಇರುವುದು ಬೆಂಗಳೂರಿನಲ್ಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ದಿನೇ ದಿನೇ ಜನಸಂದಣಿ ಹೆಚ್ಚಾಗುತ್ತಿದ್ದು, ಕೆಲಸ ಅರಸಿ ಬರುವ ವಲಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಅಂತೆಯೇ ಬೆಂಗಳೂರಿನಲ್ಲಿ ಮನೆ ಹುಡುಕಾಟ ನಡೆಸಿದ್ದ ಕೆನಡಾ ಪ್ರಜೆ ಇಲ್ಲಿನ ದರಗಳನ್ನು ಕೇಳಿ ಆಘಾತಕ್ಕೊಳಗಾಗಿದ್ದಾರೆ. 4 ಬೆಡ್ ರೂಮಿನ ಮನೆಗೆ 2.3 ಲಕ್ಷ ರೂಪಾಯಿ ತಿಂಗಳ ಬಾಡಿಗೆ, ಬರೋಬ್ಬರಿ 23 ಲಕ್ಷ ರೂಪಾಯಿ ಅಡ್ವಾನ್ಸ್ ಮೊತ್ತ ಕೇಳಲಾಗಿದೆಯಂತೆ. ಈ ಬೇಡಿಕೆ ನೋಡಿದ ಕೆನಡಾ ಪ್ರಜೆ, ವಿಶ್ವದ ಯಾವುದೇ ಇತರ ನಗರದಲ್ಲಿ ಇಲ್ಲದ ದುಬಾರಿ ಬೆಲೆ ಬೆಂಗಳೂರಿನಲ್ಲಿದೆ.
ಬೆಂಗಳೂರಿನ ಮಾಲೀಕರು ಅತ್ಯಂತ ದುರಾಸೆ ಮನೆ ಮಾಲೀಕರು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ
ಮೂಲಗಳ ಪ್ರಕಾರ ಕೆನಡಾ ಮೂಲದ ಕಂಟೆಟ್ ಕ್ರಿಯೇಟರ್ ಸೆಲೆಬ್ ಫ್ರೈಸನ್ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದ ಈ ವ್ಯಕ್ತಿ, ಆನ್‌ಲೈನ್ ಮೂಲಕ ಬಾಡಿಗೆ ಮನೆ ತಡಕಾಡಿದ್ದಾರೆ. ಈ ವೇಳೆ ಕಣ್ಣಿಗೆ ಬಿದ್ದ ಮನೆ ಮಾಲೀಕನ ಜಾಹೀರಾತು ಅಚ್ಚರಿಗೆ ಕಾರಣವಾಗಿದೆ. ಕಾರಣ ಒಂದು ತಿಂಗಳಿಗೆ 2.3 ಲಕ್ಷ ರೂಪಾಯಿ ಬಾಡಿಗೆ, 23 ಲಕ್ಷ ರೂಪಾಯಿ ಅಡ್ವಾನ್ಸ್ ಮೊತ್ತ. 4 ಬೆಡ್ ರೂಂ ಮನೆಗೆ ಇಷ್ಟೊಂದು ಮೊತ್ತ ಸೆಕ್ಯೂರಿಟಿ ಡೆಪಾಸಿಟ್ ಯಾಕೆ ಎಂದು ಕೆನಡಾ ಪ್ರಜೆ ಪ್ರಶ್ನಿಸಿದ್ದಾರೆ.
ಅಂತೆಯೇ ವಿಶ್ವದ ಯಾವುದೇ ನಗರದಲ್ಲಿಲ್ಲದ ನಿಯಮ ಬೆಂಗಳೂರಲ್ಲಿದೆ ಎಂದು ಕಿಡಿಕಾರಿರುವ ಸೆಲೆಬೆ ಫ್ರೈಸನ್ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ‘ಬೆಂಗಳೂರಿನಲ್ಲಿ ಮನೆ ಬಾಡಿಗೆ ನೀಡುವ ಮಾಲೀಕರು ವಿಶ್ವದಲ್ಲೇ ಅತ್ಯಂತ ದುರಾಸೆಯ ವ್ಯಕ್ತಿಗಳು ಎಂದಿದ್ದಾರೆ. 2.3 ಲಕ್ಷ ರೂಪಾಯಿ ತಿಂಗಳ ಬಾಡಿಗೆ ಹಾಗೂ ಸೆಕ್ಯೂರಿಟಿ ಡೆಪಾಸಿಟ್ 12 ತಿಂಗಳ ಬಾಡಿಗೆ ಕೇಳಿದ್ದಾರೆ. ಇದು ಯಾವ ನಿಮಯ? ವಿಶ್ವದ ಯಾವುದೇ ನಗರದಲ್ಲಿ ಇಲ್ಲದ ನಿಯಮ ಇಲ್ಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಇತರ ನಗರದಲ್ಲಿ ಡೆಪಾಸಿಟ್ ಮೊತ್ತ ಪಡೆಯುವ ನಿಯಮ ಕುರಿತು ವಿವರಣೆ ನೀಡಿರುವ ಅವರು ಜಗತ್ತಿನ ಪ್ರಮುಖ ನಗರಗಳಲ್ಲಿನ ಡೆಪಾಸಿಟ್ ಪ್ರಮಾಣವನ್ನು ಹೋಲಿಕೆ ಮಾಡಿದ್ದಾರೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮನೆ ಬಾಡಿಗೆ ಪಡೆಯಲು ಒಂದು ತಿಂಗಳ ಬಾಡಿಗೆ ಮೊತ್ತವನ್ನು ಡೆಪಾಸಿಟ್ ರೂಪದಲ್ಲಿ ನೀಡಬೇಕು. ಇನ್ನು ಟೊರೆಂಟೋ ನಗರದಲ್ಲಿ 1 ತಿಂಗಳ ಬಾಡಿಗೆ ಮೊತ್ತವನ್ನ ಡೆಪಾಸಿಟ್ ರೂಪದಲ್ಲಿ ನೀಡಿದರೆ ಸಾಕು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 2 ತಿಂಗಳ ಬಾಡಿಗೆ ಮೊತ್ತವನ್ನು ಡೆಪಾಸಿಟ್ ರೂಪದಲ್ಲಿ ನೀಡಬೇಕು.
ದುಬೈನಲ್ಲಿ ವಾರ್ಷಿಕ ಬಾಡಿಗೆ ಮೊತ್ತದ ಶೇಕಡಾ 5 ರಿಂದ 10 ರಷ್ಟು ಮೊತ್ತ ಸೆಕ್ಯೂರಿಟಿ ಡೆಪಾಸಿಟ್ ರೂಪದಲ್ಲಿ ನೀಡಬೇಕು. ಲಂಡನ್ನಲ್ಲಿ 5 ರಿಂದ 6 ವಾರದ ಬಾಡಿಗೆ ಮೊತ್ತವನ್ನು ಡೆಪಾಸಿಟ್ ರೂಪದಲ್ಲಿ ನೀಡಬೇಕು. ಆದರೆ ಬೆಂಗಳೂರಿನಲ್ಲಿ 10 ತಿಂಗಳ ಬಾಡಿಗೆ ಮೊತ್ತವನ್ನು ಡೆಪಾಸಿಟ್ ರೂಪದಲ್ಲಿ ನೀಡಬೇಕು ಎಂದು ಪೋಸ್ಟ್ ಮಾಡಿದ್ದಾರೆ.
