ಚಾಕು ತೋರಿಸಿ ಪ್ರೀತಿಗೆ ಬಲವಂತ! ಮುಂಬೈನಲ್ಲಿ ಅಪ್ರಾಪ್ತೆಗೆ ಬೆದರಿಕೆ

ಮುಂಬೈ: ಇಲ್ಲೊಬ್ಬ ಪಾಗಲ್ ಪ್ರೇಮಿ ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿ ಪ್ರೀತಿಸುವಂತೆ ಬೆದರಿಕೆ ಹಾಕಿ, ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ಸತಾರಾ ನಗರದ ಕರಂಜೆ ಪ್ರದೇಶದ ಶಾಲೆಯಲ್ಲಿ ಅಪ್ರಾಪ್ತ ಬಾಲಕಿ 10ನೇ ತರಗತಿ ಓದುತ್ತಿದ್ದಳು. ಆಕೆಯ ಹಿಂದೆ ಬಿದ್ದಿದ್ದ ಈ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದ. ಬಾಲಕಿ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಆಕೆಯನ್ನು ತಡೆದು ಪ್ರೀತಿಸುವಂತೆ ಕೇಳಿದ್ದಾನೆ. ಆಕೆ ನಿರಾಕರಿಸಿದ ನಂತರ ಚಾಕು ತೋರಿಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.
ಬಾಲಕಿ ಬೇಡಿಕೊಂಡರೂ ಬಿಡದೆ, ಚಾಕು ತೋರಿಸುವ ವಿಡಿಯೋ ವೈರಲ್ ಆಗಿದೆ. ಬಾಲಕಿ ಪೋಷಕರು ಕೂಡ ಯುವಕನಿಗೆ ಬುದ್ಧಿ ಹೇಳಲು ಯತ್ನಿಸಿದ್ದಾರೆ. ನನ್ನ ಮಗಳನ್ನು ಬಿಡು ಎಂದು ಬೇಡಿಕೊಳ್ಳುತ್ತಿದ್ದರೂ ಯುವಕ ಚಾಕು ಕೈಯಲ್ಲಿ ಹಿಡಿದು ಕೊಲ್ಲುವ ಬೆದರಿಕೆ ಹಾಕಿದ್ದಾನೆ.
ಇದೇ ವೇಳೆ ಅಲ್ಲೇ ಇದ್ದ ಸ್ಥಳೀಯರೂ ಕೂಡ ಯುವಕನನ್ನು ತಡೆಯಲು ಸಾಕಷ್ಟು ಯತ್ನಿಸಿದ್ದಾರೆ. ಹಿಂದಿನಿಂದ ಬಂದ ಸ್ಥಳೀಯರೊಬ್ಬರೂ ಕೊನೆಗೂ ಆ ಯುವಕನ ಕೈಯಿಂದ ಚಾಕು ಕಸಿದು ಬಾಲಕಿಯನ್ನು ರಕ್ಷಿಸಿದ್ದಾರೆ. ಸ್ಥಳೀಯರ ಚಾಕಚಕ್ಯತೆಯಿಂದ ಬಾಲಕಿ ಪ್ರಾಣ ಉಳಿದಿದೆ.
ಹುಡುಗಿಯನ್ನು ರಕ್ಷಿಸಿದ ನಂತರ ಕೋಪಗೊಂಡ ಜನರ ಗುಂಪು ಪಾಗಲ್ ಪ್ರೇಮಿ ಮೇಲೆ ಹಲ್ಲೆ ನಡೆಸಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಜನರಿಂದ ಯುವಕನನ್ನು ರಕ್ಷಿಸಿದರು. ನಂತರ ಆತನನ್ನು ಶಾಹುಪುರಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
