ಮದುವೆ ಊಟದಲ್ಲಿ ವಿಷಬಾಧೆ: ಮಲ್ಲಿಹಳ್ಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಚಿತ್ರದುರ್ಗ : ದುವೆಯಲ್ಲಿ ಊಟ ಮಾಡಿದ್ದ 100ಕ್ಕೂ ಅಧಿಕ ಜನರಿಗೆ ವಾಂತಿ ಬೇಧಿ ಉಂಟಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಹೊಸದುರ್ಗ ತಾಲೂಕಿನ ಮಲ್ಲಿಹಳ್ಳಿ ಗ್ರಾಮದಲ್ಲಿ ಮದುವೆ ಊಟ ಮಾಡಿದ್ದವರಿಗೆ ವಾಂತಿ ಬೇಧಿ ಆಗಿದೆ. ಗ್ರಾಮದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದ್ದು ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸೋಮವಾರವೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲಿಹಳ್ಳಿ ಗ್ರಾಮದ ಪ್ರಭುಲಿಂಗಪ್ಪ ಪುತ್ರನ ವಿವಾಹ ಸಂಭ್ರಮದಲ್ಲಿ ಘಟನೆ ನಡೆದಿದೆ. ಗವಿರಂಗಾಪುರ ಬೆಟ್ಟದಲ್ಲಿ ಭಾನುವಾರ ಮದುವೆ ನಡೆದಿತ್ತು. ಸೋಮವಾರ ಬೆಳಗ್ಗೆಯಿಂದ ಮದುವೆ ಹಾಜರಾದವರಿಗೆ ರಾತ್ರಿಯಿಂದಲೇ ಹೊಟ್ಟೆನೋವು ಶುರುವಾಗಿದೆ. ಬೆಳಗ್ಗೆ ವಾಂತಿಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ರೀರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗಿಗಳು ದಾಖಲಾಗಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಡ್‌ಗಳು ಭರ್ತಿಯಾಗಿದ್ದಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಮಲ್ಲಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈಗ ಬಹುತೇಕ ಎಲ್ಲರೂ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ.