ಆಹಾರ ಇಲಾಖೆಯ ಅವಾಂತರ: ಬಿಪಿಎಲ್ ಕಾರ್ಡ್ಗಳು ಎಪಿಎಲ್ ಆಗಿ ಬದಲಾವಣೆ, ರೇಷನ್ ಇಲ್ಲದೇ ಜನ ಕಂಗಾಲು

ಗದಗ: ಪಡಿತರ ಚೀಟಿ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಉಳ್ಳವರು ಪಡಿತರ ಚೀಟಿ (Ration card) ಹೊಂದಿದ್ದರೆ ಅಂಥವರನ್ನ ಹುಡುಕಿ ಕಾರ್ಡ್ ರದ್ದು ಪಡಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಗದಗ ಜಿಲ್ಲೆಯಲ್ಲಿ ಅಧಿಕಾರಿಗಳ ಯಡವಟ್ಟಿನಿಂದ ನೂರಾರು ಕೂಲಿ ಕಾರ್ಮಿಕರು, ಬಡವರ ಬಿಪಿಎಲ್ ಕಾರ್ಡ್ಗಳು (BPL Cards) ರದ್ದಾಗಿವೆ. ಪಡಿತರ ಧಾನ್ಯ ಖರೀದಿಗೆ ಹೋದಾಗ ಈ ವಿಚಾರ ತಿಳಿದು ಬಡ ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ಸರ್ಕಾರ ಬಡವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದೆ ಅಂತ ಕಿಡಿಕಾರಿದ್ದಾರೆ. ಕಾರ್ಡ್ ರದ್ದಾಗಿರುವ ಸುದ್ದಿ ತಿಳಿದ ಫಲಾನುಭವಿಗಳು ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ಎದುರಾಗಿದೆ.

ಏಕಾಏಕಿ ಕಾರ್ಡ್ ರದ್ದು: ಕಂಗಾಲಾದ ಫಲಾನುಭವಿಗಳು
ಅರ್ಹ ಫಲಾನುಭವಿಗಳಿಗೆ ಯೋಜನೆ ಮುಟ್ಟಲಿ ಎನ್ನುವ ಕಾರಣಕ್ಕೆ ಸರ್ಕಾರ ಪಡಿತರ ಪರಿಷ್ಕರಣೆಗೆ ಮುಂದಾಗಿದೆ. ರಾಜ್ಯದಾದ್ಯಂತ 8 ಲಕ್ಷ ಅನರ್ಹ ಕಾರ್ಡ್ ರದ್ದಾಗುತ್ತೆ ಎಂದೂ ಹೇಳಲಾಗ್ತಿದೆ. ಈ ಮಧ್ಯೆ ಗದಗ ಜಿಲ್ಲೆಯಲ್ಲಿ ರೇಷನ್ ತರಲು ಹೋದ ಕೆಲ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆಯಾಗಿರುವುದು ಗೊತ್ತಾಗಿದೆ. ಏಕಾಏಕಿ ಕಾರ್ಡ್ ರದ್ದಾಗಿರುವುದರಿಂದ ಕಂಗಾಲಾಗಿರುವ ಫಲಾನುಭವಿಗಳು ಗದಗನ ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಗೆ ದೌಡಾಯಿಸಿದ್ದರು.
ಕಾರ್ಡ್ ಪರಿವರ್ತನೆಯಾಗಿರೋದಕ್ಕೆ ಕಾರಣ ಏನು ಅಂತಾ ಕೇಳಿದ್ದಾರೆ. ವಾರ್ಷಿಕ 1.20 ಲಕ್ಷ ರೂ. ಮೀರಿ ವಹಿವಾಟು ನಡೆಸಿದ್ದಲ್ಲಿ ಕಾರ್ಡ್ ರದ್ದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಕೆಲ ಫನಾಲುಭವಿಗಳು ಸರ್ಕಾರದ ನಿಯಮದ ವಿರುದ್ಧವೇ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕ ಅಮಸಿದ್ದಪ್ಪ ಹಳ್ಳದ ಎಂಬ ವ್ಯಕ್ತಿ, ಸಾಥಿದಾರ ಕೂಲಿ ಕಾರ್ಮಿಕರ ಕೂಲಿಯನ್ನ ತನ್ನ ಬ್ಯಾಂಕ್ ಅಕೌಂಟ್ಗೆ ಹಾಕಿಸಿಕೊಂಡಿದ್ದರಂತೆ. ಕೂಲಿಕಾರ್ಮಿಕರಿಗೆ ಅನುಕೂಲವಾಗಲಿ ಅಂತಾ ಹಣ ಪಡೆದು ಹಂಚಿದ್ದೆ. ಹೀಗಾಗಿ ಬ್ಯಾಂಕ್ ಅಕೌಂಟ್ನಲ್ಲಿ ವಾರ್ಷಿಕ 1.20 ಲಕ್ಷ ರೂ. ವಹಿವಾಟು ಮೀರಿದೆ ಅಂತಾ ಹೇಳಿಕೊಂಡಿದ್ದಾರೆ. ಇದು ಒಬ್ಬಿಬ್ಬರ ಸಮಸ್ಯೆಯಲ್ಲ. ದಿನವೊಂದಕ್ಕೆ ಹತ್ತಾರು ಜನರು ಕಚೇರಿಗೆ ಅಲೆಯುತ್ತಿದ್ದಾರೆ. ಒಬ್ಬರದ್ದು ಒಂದೊಂದು ಕಥೆ, ನಿಯಮಗಳಿಂದಾಗ್ತಿರೋ ಗೊಂದಲ ಬಗೆಹರಿಸಿ ಅಂತಾ ಜನರು ಕೇಳಿತ್ತಿದ್ದಾರೆ.
ಸರ್ಕಾರಕ್ಕೆ ಪ್ರಶ್ನೆ ಮಾಡಿದ ಅಜ್ಜ
ಓರ್ವ ಅಜ್ಜನಿಗೆ ಹಾರ್ಟ್ ಸಮಸ್ಯೆ ಸೇರಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದೇ ಬಿಪಿಎಲ್ ಕಾರ್ಡ್ನಿಂದ ಉಚಿತವಾಗಿ ಚಿಕಿತ್ಸೆ ಪಡೆದಿದ್ದಾರೆ. ಈಗ ಏಕಾಏಕಿ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮಂಥ ಬಡವರ ಮೇಲೆ ಏಕೆ ಗದಾಪ್ರಹಾರ ಅಂತ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿದ 2 ಲಕ್ಷ 60 ಸಾವಿರ ಜನ ಇದ್ದಾರೆ. ಅದರಲ್ಲಿ 9 ಸಾವಿರ ಅರ್ಹರು ಇರಬಹು ಅಂತಾ ಇಲಾಖೆ ವರದಿ ನೀಡಿದೆ. ಅದರಲ್ಲಿ ಮಖ್ಯವಾಗಿ ವಾರ್ಷಿಕ 1.20 ಲಕ್ಷ ರೂ. ಆದಾಯ ಮಿತಿ ಮೀರಿದವರು. 25 ಲಕ್ಷ ರೂ. ಜಿಎಸ್ಟಿ ತೆರಿಗೆ ಕಟ್ಟುತ್ತಾರೆ. ಕಂಪನಿ ಮಾಲೀಕರು, ಬೇರೆ ರಾಜ್ಯದಲ್ಲೂ ಕಾರ್ಡ್ ಹೊಂದಿರುವವರನ್ನ ಗುರುತಿಸಲಾಗಿದೆ. ಜಿಲ್ಲಾ ಕಚೇರಿಯಿಂದ ತಾಲೂಕು ಫುಡ್ ಇನ್ಸಪೆಕ್ಟರ್ಗಳಿಗೆ ಪರಿಶೀಲನೆ ನಡೆಸುವುದಕ್ಕೆ ರವಾನಿಸಲಾಗಿದೆ. ಪರಿಣಾಮ 4,708 ಕಾರ್ಡ್ಗಳು ಅನರ್ಹ ಎಂದು ಗುರುತಿಸಿ ಕ್ರಮ ತೆಗೆದುಕೊಳ್ಳಲಾಗಿದೆ. ಬಹುತೇಕ ಕಾರ್ಡ್ಗಳನ್ನ ಎಪಿಎಲ್ಗಳಾಗಿ ಪರಿವರ್ತಿಸಿದರೆ, 56 ಕಾರ್ಡ್ಗಳನ್ನ ರದ್ದು ಮಾಡಲಾಗಿದೆ. ಗೈಡ್ ಲೈನ್ಸ್ ಪ್ರಕಾರವೇ ಪ್ರಕ್ರಿಯೆ ಮಾಡಲಾಗಿದೆ. ಅಲ್ಲೊಂದು, ಇಲ್ಲೊಂದು ಅರ್ಹ ಫಲಾನುಭವಿಗಳು ಮಿಸ್ ಆಗಿದ್ದರೆ, ಅವರನ್ನ ಮತ್ತೆ ಪಟ್ಟಿಗೆ ಸೇರಿಸುರವ ಕೆಲಸ ಮಾಡುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ್ ಎಂಎಸ್ ಹೇಳಿದ್ದಾರೆ.
ಸರ್ಕಾರದ ನಿಯಮದಿಂದ ಅರ್ಹರಿಗೂ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸರ್ಕಾರ ಪುನಪರಿಶೀಲನೆ ನಡೆಸಬೇಕಿದೆ. ಜೊತೆಗೆ ಅಧಿಕಾರಿಗಳು ಮನೆಮನೆಗೆ ತೆರಳ ಸ್ಥಿತಿಗತಿಯನ್ನ ಆಧರಿಸಿ ಕಾರ್ಡ್ ಪರಿವರ್ತನೆ ಮಾಡಬೇಕು. ಇಲ್ಲವಾದಲ್ಲಿ ಅರ್ಹ ಫಲಾನುಭವಿಗಳೂ ಯೋಜನೆಯಿಂದ ವಂಚಿತರಾಗುವುದು ಗ್ಯಾರಂಟಿ.
