ಅಮೆರಿಕದ ಶೇ.25 ಸುಂಕ ಒಪ್ಪಂದದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ

ನವದೆಹಲಿ:ಭಾರತದಿಂದ ಸರಬರಾಜಾಗುವ ಸರಕುಗಳ ಮೇಲೆ ಶೇ. 25 ಸುಂಕ (25 percent tariffs) ಮತ್ತು ಹೆಚ್ಚುವರಿ ದಂಡ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಧಿಕೃತ ಘೋಷಣೆ ಮಾಡಿದ್ದಾರೆ. ಭಾರತ ಅಧಿಕ ಟ್ಯಾರಿಫ್ ವಿಧಿಸುತ್ತಿರುವುದು, ಹಣಕಾಸೇತರ ವ್ಯಾಪಾರ ನಿರ್ಬಂಧ (non monetary trade barriers) ಹೊಂದಿರುವುದು, ರಷ್ಯಾ ಇಂಧನ ಖರೀದಿಸುತ್ತಿರುವುದು, ಈ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಭಾರತದ ಮೇಲೆ ಆಮದು ಸುಂಕ ಹಾಕುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಇದರ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ. “ಭಾರತ ಹಾಗೂ ಅಮೆರಿಕ ನಡುವೆ ಒಪ್ಪಂದ ಏರ್ಪಡುವ ಕುರಿತು ರಾಷ್ಟ್ರೀಯ ಹಿತಾಸಕ್ತಿ ಆಧಾರದ ಮೇಲೆ ಅಧ್ಯಯನ ನಡೆಸಲಾಗುತ್ತಿದೆ” ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕಳೆದ ಕೆಲವು ತಿಂಗಳಿಂದ ಭಾರತ ಹಾಗೂ ಅಮೆರಿಕವು ಮುಕ್ತ, ನ್ಯಾಯಸಮ್ಮತ ಹಾಗೂ ಪರಸ್ಪರ ಅನುಕೂಲವಾಗುವ ದಿಸೆಯಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿದೆ. ಇದೇ ಉದ್ದೇಶದೊಂದಿಗೆ ಭಾರತ ಮುಂದಡಿ ಇರಿಸುತ್ತದೆ ಎಂದು ಪ್ರಕಟಣೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
“ನಮ್ಮ ದೇಶದ ರೈತರು, ಉದ್ಯಮಿಗಳು ಹಾಗೂ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಗಳ ಏಳಿಗೆಯೇ ಪರಮೋಚ್ಚ ಬದ್ಧತೆಯಾಗಿದೆ. ರಾಷ್ಟ್ರೀಯ ಹಿತಾಸಕ್ತಿಯೂ ನಮ್ಮ ಪ್ರಾಮುಖ್ಯತೆಯಾಗಿದೆ. ಬ್ರಿಟನ್ ಜತೆ ಮಾಡಿಕೊಂಡ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನೇ ಅಮೆರಿಕದ ಜತೆಗೂ ಮಾಡಿಕೊಳ್ಳುವುದು ನಮ್ಮ ಉದ್ದೇಶ” ಎಂದು ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ.
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಸಂಬಂಧ ದೊಡ್ಡ ಮಟ್ಟದಲ್ಲಿ ಇದೆಯಾದರೂ ಅಮೆರಿಕಕ್ಕೆ ಟ್ರೇಡ್ ಡೆಫಿಸಿಟ್ ಇದೆ. 40 ಬಿಲಿಯನ್ ಡಾಲರ್ಗೂ ಅಧಿಕ ಮೊತ್ತದ ಟ್ರೇಡ್ ಡೆಫಿಸಿಟ್ ಅನ್ನು ಅಮೆರಿಕ ಹೊಂದಿದೆ. ಈ ಕೊರತೆಯನ್ನು ಸರಿದೂಗಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ರಷ್ಯಾ ಬದಲು ತನ್ನ ತೈಲವನ್ನು ಭಾರತ ಖರೀದಿಸಲಿ ಎನ್ನುವ ಅಪೇಕ್ಷೆ ಮತ್ತು ನಿರೀಕ್ಷೆ ಅಮೆರಿಕದ್ದಾಗಿದೆ.
ಇನ್ನು ಭಾರತ ಮತ್ತು ಅಮೆರಿಕ ನಡುವೆ ಟ್ರೇಡ್ ಡೀಲ್ ಅಂತಿಮಗೊಳಿಸಲು ಸೆಪ್ಟೆಂಬರ್ ತಿಂಗಳಲ್ಲಿ ಆರನೇ ಸುತ್ತಿನ ಮಾತುಕತೆ ಇದೆ. ಆಗ ಒಪ್ಪಂದವು ಅಂತಿಮ ಹಂತಕ್ಕೆ ಬರಬಹುದು.