ಮಂಜು ಮುಸುಕಿದ ವಾತಾವರಣ: ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 4 ವಿಮಾನಗಳು ಬೆಂಗಳೂರಿಗೆ ಡೈವರ್ಟ್

ಮಂಗಳೂರು: ಮಂಗಳೂರಿನಲ್ಲಿ ಇಳಿಯಬೇಕಾಗಿದ್ದ ಒಟ್ಟು 4 ವಿಮಾನಗಳಿಗೆ ಲ್ಯಾಂಡಿಂಗ್ ಸಾಧ್ಯವಾಗದೆ ಆಕಾಶದಲ್ಲಿಯೇ ತಿರುಗಿ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಅಬುಧಾಬಿ ಯಿಂದ ಮುಂಜಾನೆ 4.25ಕ್ಕೆ ಮಂಗಳೂರಿಗೆ ಆಗಮಿಸಬೇಕಿದ್ದ ಏರ್ ಇಂಡಿಯಾ ವಿಮಾನಕ್ಕೆ ಲ್ಯಾಂಡಿಂಗ್ ಸಾಧ್ಯವಾಗದೆ ಅದು ಬೆಂಗಳೂರಿಗೆ ನಿರ್ಗಮಿಸಿದೆ.
ಅದರಲ್ಲಿದ್ದ ಪ್ರಯಾಣಿಕರನ್ನು ಮತ್ತೂಂದು ವಿಮಾನದಲ್ಲಿ ಬಳಿಕ 10.20ರ ಸುಮಾರಿಗೆ ಮಂಗಳೂರಿಗೆ ಕರೆತರಲಾಯಿತು. ದುಬಾೖನಿಂದ ಮಂಗಳೂರಿನಲ್ಲಿ ಇಳಿಯಬೇಕಿದ್ದ ವಿಮಾನವೂ ಬೆಳಗ್ಗೆ ಲ್ಯಾಂಡಿಂಗ್ ಸಾಧ್ಯವಾಗದೆ ಬೆಂಗಳೂರಿಗೆ ತೆರಳಿತ್ತು. ಬಳಿಕ ಈ ವಿಮಾನವು ಮಧ್ಯಾಹ್ನ 1.05ರ ಸುಮಾರಿಗೆ ಮಂಗಳೂರಿಗೆ ಆಗಮಿಸಿದೆ.
ಹೈದರಾಬಾದ್ ವಿಮಾನ ರದ್ದು!
ಬಹರೈನ್‌ನಿಂದ ಬೆಳಗ್ಗೆ 7.40ಕ್ಕೆ ಮಂಗಳೂರಿನಲ್ಲಿ ಇಳಿಯಬೇಕಿದ್ದ ವಿಮಾನವು ಲ್ಯಾಂಡಿಂಗ್ ಸಾಧ್ಯವಾಗದೆ ಬೆಂಗಳೂರಿಗೆ ತೆರಳಿತ್ತು. ಬಳಿಕ ಈ ವಿಮಾನವು ಮಧ್ಯಾಹ್ನ 12ರ ಸುಮಾರಿಗೆ ಮಂಗಳೂರಿಗೆ ಬಂದಿದೆ. ಈ ಮಧ್ಯೆ ಮಂಗಳೂರು-ಹೈದರಾಬಾದ್ ಮಧ್ಯೆ ತೆರಳಬೇಕಿದ್ದ ವಿಮಾನ ಸಂಚಾರವೇ ರದ್ದುಗೊಂಡಿತ್ತು. ಮುಂಬಯಿಯಿಂದ 7.30ಕ್ಕೆ ಆಗಮಿಸಬೇಕಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ತಡವಾಗಿ (9.10) ಮಂಗಳೂರಿನಲ್ಲಿ ಲ್ಯಾಂಡ್ ಆಗಿದೆ.
ದೇಶ- ವಿದೇಶದಿಂದ ಪ್ರಯಾಣಿಕರು ಬರುತ್ತಾರೆ ಎಂಬ ನಿರೀಕ್ಷೆ ಕಾತರದಿಂದ ಏರ್‌ಪೋರ್ಟ್ ಹೊರಗಡೆ ಕಾದು ಕುಳಿತವರು ವಿಮಾನ ಡೈವರ್ಟ್‌ನಿಂದಾಗಿ ನಿರಾಶೆ ಹಾಗೂ ಆತಂಕಕ್ಕೆ ಒಳಗಾಗಿದ್ದರು. ಜತೆಗೆ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರು ಕೂಡ ಕೆಲವು ತಾಸು ವಿಳಂಬ ಎದುರಿಸಬೇಕಾಯಿತು.
ಕಾರಣವೇನು?
ಬೆಳಗ್ಗೆ ದಟ್ಟ ಮಂಜು ಮುಸುಕಿದ ವಾತಾವರಣ ಇರುವ ಕಾರಣದಿಂದ ಮುಂಜಾನೆಯ ಸಮಯದಲ್ಲಿ ಮಂಗಳೂರಿನಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಪೈಲೆಟ್‌ಗಳಿಗೆ ರನ್‌ವೇ ಸ್ವಷ್ಟವಾಗಿ ಕಾಣಿಸುವುದಿಲ್ಲ. ಅಸ್ಪಷ್ಟ ಇದ್ದಾಗ ವಿಮಾನ ಲ್ಯಾಂಡಿಂಗ್ ಬದಲು ಹತ್ತಿರದ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗುತ್ತದೆ.
ಬೆಂಗಳೂರಿನಿಂದ ಆಗಮಿಸಿ ಮರಳಿ ಬೆಂಗಳೂರಿಗೆ!
ಬೆಂಗಳೂರಿನಿಂದ ಆಗಮಿಸಿ ಬೆಳಗ್ಗೆ 6.55ಕ್ಕೆ ಮಂಗಳೂರಿನಲ್ಲಿ ಲ್ಯಾಂಡಿಂಗ್ ಆಗಬೇಕಿದ್ದ ಇಂಡಿಗೋ ವಿಮಾನವೂ ಹವಾಮಾನ ವೈಪರಿತ್ಯದ ಕಾರಣದಿಂದ ಆಕಾಶದಲ್ಲಿಯೇ ಸುತ್ತು ಹಾಕಿ ಲ್ಯಾಂಡಿಂಗ್ ಆಗಲು ಸಾಧ್ಯವಾಗದೆ ಮರಳಿ ಬೆಂಗಳೂರಿಗೆ ನಿರ್ಗಮಿಸಿತ್ತು. ಬಳಿಕ 10.40ರ ಸುಮಾರಿಗೆ ಈ ವಿಮಾನ ಮಂಗಳೂರಿಗೆ ಆಗಮಿಸಿದೆ. ಅಲ್ಲಿಯವರೆಗೆ ಪ್ರಯಾಣಿಕರು ಕಾದು ಸುಸ್ತಾದರು.
