ಚಾಮರಾಜನಗರದಲ್ಲಿ ಹೂ ಬೆಳೆಗಾರರ ಸಂಕಷ್ಟ: ಹಬ್ಬದ ನಂತರ ದರ ಪಾತಾಳಕ್ಕೆ, ಮಳೆಗೆ ಹೂ ಕೊಳೆತು ನಷ್ಟ!

ಚಾಮರಾಜನಗರ: ಆಯುಧ ಪೂಜೆ, ವಿಜಯ ದಶಮಿ ಹಬ್ಬದ ನಂತರ ಹೂವಿನ ದರ ಪಾತಾಳಕ್ಕೆ ಕುಸಿದಿದ್ದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ತೀವ್ರ ಬೆಲೆ ಕುಸಿತ, ಮತ್ತೊಂದೆಡೆ ಭಾರಿ ಮಳೆಗೆ ಹೂ ಕೊಳೆಯುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಹೂಗೆ ಬೇಡಿಕೆಯೇ ಇಲ್ಲದಂತಾಗಿದೆ.

ಕುಸಿದ ದರ: ಆಯುಧಪೂಜೆ, ವಿಜಯ ದಶಮಿ ಹಬ್ಬದ ಸಂದರ್ಭ ಬಹುತೇಕ ಹೂಗಳ ದರ ಗಗನಕ್ಕೇರಿತ್ತು. ಸೇವಂತಿಗೆ ಕೆ.ಜಿಗೆ 200, ಸಣ್ಣ ಮಲ್ಲಿಗೆ, ಮಲ್ಲಿಗೆ ₹ 800, ಕನಕಾಂಬರ ₹1,000, ಸುಗಂಧರಾಜ ₹400, ಗುಲಾಬಿ ₹400, ಚೆಂಡು ಹೂ 60ರ ಗಡಿ ದಾಟಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.
ಹಬ್ಬದ ಸೀಸನ್ ಮುಗಿಯುತ್ತಿದ್ದಂತೆ ಹೂಗಳಿಗೆ ಬೇಡಿಕೆ ಇಲ್ಲದಂತಾಗಿದೆ ಎನ್ನುತ್ತಾರೆ ಚೆನ್ನಾಪುರದ ಮೊಳೆ ರಸ್ತೆಯ ಹೂವಿನ ವ್ಯಾಪಾರಿ ರವಿ.
ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ಕಾಕಡ ₹40, ಸಣ್ಣ ಮಲ್ಲಿಗೆ ₹80, ಮಲ್ಲಿಗೆ ₹160, ಗುಲಾಬಿ ₹120, ಸೇವಂತಿ ₹20ರಿಂದ ₹30, ಚೆಂಡು ಹೂ ₹10, ಸುಗಂಂಧರಾಜ ₹40ರಿಂದ ₹50, ಕನಕಾಂಬರ ₹600 ದರ ಇದೆ.
ಹಬ್ಬ ಹರಿದಿನಗಳು ಸೇರಿದಂತೆ ಶುಭ ಸಮಾರಂಭಗಳು ನಡೆಯದಿರುವುದು, ಭಾರಿ ಮಳೆಗೆ ಹೂವಿನ ಗುಣಮಟ್ಟ ಕುಸಿದಿರುವುದು ದರ ಇಳಿಕೆಗೆ ಪ್ರಮುಖ ಕಾರಣ. ದೀಪಾವಳಿ ಹಬ್ಬದವರೆಗೂ ದರ ಇಳಿಮುಖವಾಗಿಯೇ ಇರುತ್ತದೆ ಎನ್ನುತ್ತಾರೆ ಅವರು.
ಹೂವನ್ನು ಹೆಚ್ಚು ದಿನ ಸಂರಕ್ಷಿಸಿಡಲು ಸಾಧ್ಯವಿಲ್ಲದಿರುವುದರಿಂದ ಗ್ರಾಹಕರು ಮುಂಚಿತವಾಗಿ ಖರೀದಿಸಿ ಇಡುವುದಿಲ್ಲ. ಹಬ್ಬಕ್ಕೆ ಒಂದೆರಡು ದಿನ ಇರುವಾಗ ಗ್ರಾಹಕರು ಖರೀದಿ ಆರಂಭಿಸುತ್ತಾರೆ. ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ದರ ಭಾರಿ ಏರಿಕೆಯಾಗುವ ಸಂಭವ ಹೆಚ್ಚಾಗಿದೆ.
ಶತಕದ ಗಡಿಯಲ್ಲಿ ಬೀನ್ಸ್: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಬೀನ್ಸ್ ಹಾಗೂ ಟೊಮೆಟೊ ದರ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೀನ್ಸ್ 80 ರಿಂದ 100ರವರೆಗೆ ದರ ಇದ್ದು ಗ್ರಾಹಕರ ಜೇಬಿಗೆ ಭಾರವಾಗಿದೆ. ಎಡೆಬಿಡದೆ ಸುರಿದ ಮಳೆಗೆ ಬೀನ್ಸ್ ಹಾಗೂ ಟೊಮೆಟೊ ಜಮೀನಿಲ್ಲಿಯೇ ಕೊಳೆತಿದ್ದರಿಂದ ದರ ಹೆಚ್ಚಾಗಿದೆ. ಮಳೆ ಮುಂದುವರಿದರೆ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ವ್ಯಾಪಾರಿಗಳು. ದಪ್ಪ ಈರುಳ್ಳಿ ದರವೂ ಇಳಿಕೆಯಾಗಿಲ್ಲ. ಕೆ.ಜಿಗೆ ₹50 ರಿಂದ ₹60 ದರ ಇದೆ.
ಉಳಿದ ತರಕಾರಿಗಳ ದರ ಅಲ್ಪ ಇಳಿಕೆಯಾಗಿದೆ. ಕಳೆದವಾರ ₹50 ರಿಂದ ₹60 ಇದ್ದ ಕ್ಯಾರೆಟ್ ದರ ಈ ವಾರ ₹40ಕ್ಕೆ ಇಳಿಕೆಯಾಗಿದೆ. ಬೆಂಡೆ, ಬದನೆ, ಮೂಲಂಗಿ, ಬೀಟ್‌ರೂಟ್ ದರ ಕೆ.ಜಿಗೆ ₹30 ರಿಂದ ₹40 ಇವೆ.
