ಪಾಕಿಸ್ತಾನದಲ್ಲಿ ಪ್ರವಾಹದ ಭೀಕರತೆ: ಲೈವ್ ವರದಿ ಮಾಡುತ್ತಿದ್ದ ವರದಿಗಾರ ಕೊಚ್ಚಿ ಹೋದ ವಿಡಿಯೋ ವೈರಲ್!

ಇಸ್ಲಾಮಾಬಾದ್: ನಿರಂತರ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹಕ್ಕೆ ಪಾಕಿಸ್ತಾನದ ಹಲವು ಪ್ರದೇಶಗಳು ತುತ್ತಾಗಿವೆ, ಭೀಕರ ಪ್ರವಾಹ ಮತ್ತು ಮಳೆಯಿಂದಾಗಿ ಇದುವರೆಗೆ ಸುಮಾರು 116 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಕೆಲವರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಇದರ ನಡುವೆ ಪಾಕಿಸ್ತಾನದ ವರದಿಗಾರನೆಂದು ಹೇಳಿಕೊಂಡಿರುವ ವ್ಯಕ್ತಿಯ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಅದೇನೆಂದರೆ ಭೀಕರ ಪ್ರವಾಹದ ಕುರಿತು ವರದಿ ಮಾಡಲು ಬಂದಿದ್ದ ವರದಿಗಾರ ಲೈವ್ ವರದಿ ಮಾಡುತ್ತಲೇ ಪ್ರವಾಹದ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿರುವುದು.
ಈ ಕುರಿತ ವಿಡಿಯೋ ಒಂದನ್ನು ಪಾಕಿಸ್ತಾನದ ಅಲ್ ಅರೇಬಿಯಾ ಇಂಗ್ಲಿಷ್ ಎಂಬ ಸುದ್ದಿ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೊದಲ್ಲಿ ವರದಿಗಾರನೆಂದು ಹೇಳಿಕೊಳ್ಳಲಾಗಿರುವ ವ್ಯಕ್ತಿ ಕುತ್ತಿಗೆಯವರೆಗೆ ನೀರಿನಲ್ಲಿ ಮುಳುಗಿ ಕೈಯಲ್ಲಿ ಮೈಕ್ರೊಫೋನ್ ಹಿಡಿದಿರುವುದನ್ನು ಕಾಣಬಹುದು. ಇದಾದ ಕೆಲ ಹೊತ್ತಿನ ಬಳಿಕ ಆತ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದಂತೆ ಕಾಣುತ್ತದೆ,
ಜನರಿಂದ ಮಿಶ್ರ ಪ್ರತಿಕ್ರಿಯೆ:
ಇನ್ನು ವೈರಲ್ ಆಗುತ್ತಿರುವ ವಿಡಿಯೋ ಕುರಿತು ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೆಲವರು ಪ್ರವಾಹದ ನಡುವೆಯೂ ವರದಿಗಾರನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಇದು ಕೇವಲ ಟಿಆರ್ ಪಿ ಗೋಸ್ಕರ ಮಾಡಿರುವ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಇಷ್ಟೊಂದು ಸಾಹಸ ಮಾಡಿ ವರದಿ ಮಾಡುವ ದುಸ್ಸಾಹಸ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ, ಜೊತೆಗೆ ಇನ್ನೂ ಕೆಲವರು ಇದು AI ಆಧಾರಿತ ವಿಡಿಯೋ ಆಗಿರಬಹುದು ಎಂದು ಹೇಳಿಕೊಂಡಿದ್ದಾರೆ.
