ನಾಲ್ಕು ಅಂತಸ್ತಿನ ಮನೆಯಲ್ಲಿ ಅಗ್ನಿ ಅವಘಡ; ಅಗ್ನಿಶಾಮಕ ದಳದಿಂದ ಮೂವರ ರಕ್ಷಣೆ, ಓರ್ವ ಗೃಹಿಣಿ ದುರ್ಮರಣ.

ಬೆಂಗಳೂರು: ಬೆಂಗಳೂರಿನ (Bangalore) ಗಾಯತ್ರಿ ನಗರದಲ್ಲಿರುವ ಕಂಟ್ರ್ಯಾಕ್ಟರ್ ರಮೇಶ್ ಬಾಬು ಅವರ ನಾಲ್ಕು ಅಂತಸ್ತಿನ ಮನೆಯಲ್ಲಿ ಮೂರನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಂಭವಿಸಿದ ಅವಘಡದಲ್ಲಿ ರಮೇಶ್ ಬಾಬು ಅವರ ಪತ್ನಿ 53 ವರ್ಷದ ಸವಿತಾ ದುರ್ಮರಣ ಹೊಂದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಮೇಶ್ ಬಾಬು, ಅವರ ತಾಯಿ ಸಣ್ಣಮ್ಮ ಹಾಗೂ ಮಗನನ್ನು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ.
