ಬೆಂಗಳೂರಿನ EV ಶೋರೂಮ್‌ನಲ್ಲಿ ಬೆಂಕಿ ಅವಘಡ: ₹ ಲಕ್ಷಾಂತರ ಮೌಲ್ಯದ 19 ಇವಿ ಬೈಕ್‌ಗಳು ಭಸ್ಮ

ಬೆಂಗಳೂರು: ಎಲೆಕ್ಟ್ರಿಕ್ ಶೋ ರೂಮ್‌ವೊಂದರಲ್ಲಿ ಬೆಂಕಿ ಅವಘಢ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಇವಿ ಬೈಕ್‌ಗಳು ಬೆಂಕಿಗಾಹುತಿಯಾಗಿರುವ ಘಟನೆ ಕನಕಪುರ ರಸ್ತೆಯ ಯಲಚೇನಹಳ್ಳಿಯ ಎಲೆಕ್ಟ್ರಿಕ್ ಶೋರೂಮ್‌ನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಬೆಳಗ್ಗೆ ಸುಮಾರು 8 ಗಂಟೆ ಸುಮಾರಿಗೆ 4 ಅಂತಸ್ತಿನ ಕಟ್ಟಡದ ನೆಲಮಳಿಗೆಯಲ್ಲಿರುವ ಇವಿ ಶೋರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿ ಶಾಮಕದ ದಳದ ಸಹಾಯವಾಣಿಗೆ ಬಂದ ಕರೆ ಆಧರಿಸಿ ಸ್ಥಳಕ್ಕೆ 2 ವಾಹನಗಳಲ್ಲಿ ತೆರಳಿದ ಸಿಬ್ಬಂದಿ ಸುಮಾರು ಮೂರೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಅಲ್ಲದೆ, ಕ್ಷೀಪ್ರ ಕಾರ್ಯಾಚರಣೆ ನಡೆಸಿ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸದಂತೆ ಕ್ರಮ ಕೈಗೊಳ್ಳಲಾಯಿತು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ನೆಲಮಹಡಿಯಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ವೇಳೆ ಬ್ಯಾಟರಿಗಳು ಸ್ಫೋಟಗೊಂಡಿವೆ ಎಂಬುದು ಗೊತ್ತಾಗಿದೆ. ಘಟನೆಯಲ್ಲಿ ಶೋರೂಮ್‌ನಲ್ಲಿದ್ದ 19 ಇವಿ ವಾಹನಗಳು ಸುಟ್ಟು ಕರಕಲಾಗಿವೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಿದರು.