ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ವಿನಯ್ ಗೌಡ, ರಜತ್ ಕಿಶನ್ ವಿರುದ್ಧ ಎಫ್‌ಐಆರ್

ವಿನಯ್ ಗೌಡ ಹಾಗೂ ರಜತ್ ಕಿಶನ್ ಇತ್ತೀಚೆಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಇದೀಗ ಇದೇ ಕಾರಣಕ್ಕಾಗಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಜತ್ ಕಿಶನ್ ಜೊತೆ ನಟ ವಿನಯ್ ಗೌಡ ಒಂದು ಮಸ್ತ್ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗು ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದ ಬೆನ್ನಲ್ಲೇ ರಜತ್, ವಿನಯ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ಈ ರೀಲ್ಸ್ ಅನ್ನು ‘ಬುಜ್ಜಿ’ ಅನ್ನೋ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈ ವಿಡಿಯೋ ಗಮನಿಸಿದ ಪೊಲೀಸರು, ಇಬ್ಬರ ವಿರುದ್ಧ ಆರ್ಮ್ಸ್ ಆಕ್ಟ್ ಆಡಿ ಕೇಸ್ ದಾಖಲಿಸಿದ್ದಾರೆ. ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್ ಮಾಡುವುದು, ಭಯದ ವಾತಾವರಣ ಸೃಷ್ಟಿಸೋದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ಹಿನ್ನೆಲೆ ಈ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.