ಕೂಲರ್ ಮುಂದೆ ಕುಳಿತುಕೊಂಡ ವಿರೋಧಕ್ಕೆ ಜಗಳ: ಮದುವೆ ಮನೆಯಲ್ಲಿ ಗಲಾಟೆ

ಲಕ್ನೋ: ಕೂಲರ್‌ಗಾಗಿ ವರ ಹಾಗೂ ವಧುವಿನ ಕಡೆಯವರು ಕುರ್ಚಿ ಎಸೆದು ಜಗಳವಾಡಿದ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೇ 28ರಂದು ಝಾನ್ಸಿಯ ನಂದನ್‌ಪುರ ಪ್ರದೇಶದಲ್ಲಿ ಆವಾಸ್ ವಿಕಾಸ್ ನಿವಾಸಿ ಸೋನು ಹಾಗೂ ಸಪ್ನಾ ಎಂಬುವವರ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದ್ದು, ಕುರ್ಚಿಯಿಂದ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಎಲ್ಲಾ ಕಾರ್ಯಕ್ರಮಗಳು ಮುಗಿದ ಬಳಿಕ ರಾತ್ರಿ ವೇಳೆ ಅತಿಥಿಗಳು ಊಟಕ್ಕೆಂದು ಕುಳಿತಿದ್ದರು. ಇದೇ ವೇಳೆ ಆರಾಮಕ್ಕೆಂದು ಇರಿಸಿದ್ದ ಕೂಲರ್‌ನ ಮುಂದೆ ವರ ಹಾಗೂ ವಧು ಬಂದು ಕುಳಿತುಕೊಂಡರು. ಅವರು ಕುಳಿತಿದ್ದೇ ತಡ ವರನ ಕಡೆಯವರು ಚೂರು ಗಾಳಿಯೂ ಹಾದುಹೋಗದಂತೆ ಕೂಲರ್‌ಗೆ ಅಡ್ಡವಾಗಿ ಕುಳಿತರು. ಈ ಸಮಯದಲ್ಲಿ ಸ್ವಲ್ಪ ಆಕಡೆ ಸರಿದು ಕುಳಿತುಕೊಳ್ಳಲು ಹೇಳಿದಾಗ ಇಬ್ಬರ ಮಧ್ಯೆ ವಾಗ್ವಾದ ಶುರುವಾಯಿತು.
ಮಾತು ತಾರಕಕ್ಕೇರಿ ವರ ಹಾಗೂ ವಧುವಿನ ಕಡೆಯವರ ಮಧ್ಯೆ ಜಗಳ ಪ್ರಾರಂಭವಾಯಿತು. ಕುರ್ಚಿಗಳನ್ನು ಎಸೆದು ಅಟ್ಟಾಡಿಸಿಕೊಂಡು ಹೊಡೆದಾಡಿ, ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದರು. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬರುವಷ್ಟರಲ್ಲಿ ಜಗಳ ಕಡಿಮೆಯಾಗಿತ್ತು.
ಮಾರನೇ ದಿನ (ಮೇ 29) ವಧುವಿನ ಕುಟುಂಬಸ್ಥರು ಘಟನೆಯ ವೀಡಿಯೊಗಳೊಂದಿಗೆ ಎಸ್‌ಎಸ್‌ಪಿ ಕಚೇರಿಗೆ ಭೇಟಿ ನೀಡಿದರು. ಈ ಕುರಿತು ವಧುವಿನ ಸಹೋದರ ಮೋಹಿತ್ ಮಾತನಾಡಿ, ನಾವು ಆಹಾರ ಬಡಿಸುತ್ತಿದ್ದಾಗ ಕೆಲವು ಹುಡುಗರು ಕೂಲರ್‌ನ ಮುಂದೆ ಕುಳಿತರು. ವರ ಹಾಗೂ ವಧುವಿಗೆ ಸ್ವಲ್ಪ ಗಾಳಿ ಹೋಗಲು ಬಿಡಿ ಎಂದು ಕೇಳಿದಾಗ ಜಗಳ ಪ್ರಾರಂಭಿಸಿದರು ಎಂದು ಹೇಳಿದ್ದಾರೆ.
