ಕಲಬುರಗಿಯಲ್ಲಿ ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳ ಫೈಟ್: CDPO ಹುದ್ದೆಗಾಗಿ ಶ್ರೀನಿವಾಸ್ ಮತ್ತು ಶಿವಶರಣಪ್ಪ ನಡುವೆ ತಿಕ್ಕಾಟ

ಕಲಬುರಗಿ: ಕರ್ನಾಟಕದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಒಂದೇ ಹುದ್ದೆ, ಒಂದೇ ಕುರ್ಚಿಗಾಗಿ ಅಧಿಕಾರಿಗಳ ನಡುವೆ ಕಿತ್ತಾಟ ನಡೆದಿರುವ ಪ್ರಸಂಗಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಮೇಲಾಧಿಕಾರಿಗಳ ಬೇಜವಾಬ್ದಾರಿಯಿಂದಲೋ, ಇಲಾಖೆಯ ಲೋಪದಿಂದಾಗಿಯೋ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಈ ಸಾಲಿಗೀಗ ಕಲಬುರಗಿಯ ಚೈಲ್ಡ್ ಡೆವಲಪ್ಮೆಂಟ್ ಪ್ರೊಜೆಕ್ಟ್ ಆಫೀಸರ್ (CDPO) ಹುದ್ದೆಯೂ ಸೇರ್ಪಡೆಯಾಗಿದೆ.

ಕಲಬುರಗಿ ನಗರ CDPO ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಫೈಟ್ ಶುರುವಾಗಿದ್ದು, ಶ್ರೀನಿವಾಸ್ ಬಾಳವಾಳೆ ಮತ್ತು ಶಿವಶರಣಪ್ಪ ಎಂಬ ಅಧಿಕಾರಿಗಳ ನಡುವೆ ತಿಕ್ಕಾಟ ಶುರುವಾಗಿದೆ. ಶ್ರೀನಿವಾಸ್ ಬಾಳವಾಳೆ ಅವರನ್ನು CDPO ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅದರಂತೆ ಶ್ರೀನಿವಾಸ್ ಅವರೂ ಕಲಬುರಗಿಯಲ್ಲಿ ಅಧಿಕಾರ ಸ್ವೀಕರಿಸಿದ್ದರು. ಇದಾಗಿ ಒಂದು ತಿಂಗಳಲ್ಲೆ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆ ಜಾಗಕ್ಕೆ ಶಿವಶರಣಪ್ಪ ಅವರನ್ನ ನೇಮಿಸಿ ಸರ್ಕಾರ ಆದೇಶಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಶ್ರೀನಿವಾಸ್ ಅವರು ಕೆಎಟಿ (Karnataka Appellate Tribunal) ಮೊರೆ ಹೋಗಿದ್ದು, ಆರ್ಡರ್ಗೆ ಸ್ಟೇ ಕೂಡ ತಂದಿದ್ದರು. ಆ ಬಳಿಕ ಸರ್ಕಾರ ಮೂವ್ಮೆಂಟ್ ಆರ್ಡರ್ ನೀಡದೆ ಇದ್ದರೂ ಕಲಬುರಗಿ CDPO ಆಗಿ ಶ್ರೀನಿವಾಸ್ ಮರಳಿ ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತ ಸರ್ಕಾರ ರಿಲೀವ್ ಆರ್ಡರ್ ನೀಡದ ಹಿನ್ನಲೆ ಶಿವಶರಣಪ್ಪ ಅವರೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ಇಬ್ಬರಲ್ಲಿ CDPO ಯಾರು?: ಸಿಬ್ಬಂದಿಗೆ ಗೊಂದಲ
ಕಳೆದ 15 ದಿನಗಳಿಂದ ಶ್ರೀನಿವಾಸ್ ಬಾಳವಾಳೆ ಮತ್ತು ಶಿವಶರಣಪ್ಪ ಇಬ್ಬರೂ ಒಂದೇ ಹುದ್ದೆಯಲ್ಲಿ ಅಧಿಕಾರ ಚಲಾವಣೆ ಮಾಡುತ್ತಿದ್ದಾರೆ. ಹೀಗಾಗಿ ಇಬ್ಬರು ಅಧಿಕಾರಿಗಳ ಪೈಕಿ ಯಾರು CDPO ಎಂಬ ಗೊಂದಲದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿ ಇದ್ದು, ಯಾರ ಆದೇಶ ಪಾಲಿಸಬೇಕು ಎಂದು ಗೊತ್ತಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕಾದ ಇಲಾಖೆಯ ಹಿರಿಯ ಅಧಿಕಾರಿಗಳೂ ಮೌನಕ್ಕೆ ಶರಣಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.