ಮೂಡಿಗೆರೆಯಲ್ಲಿ ಮಕ್ಕಳಲ್ಲಿ ಹೆಚ್ಚಿದ ಜ್ವರ: ಮೂವರು ಸಾವು, ಆತಂಕದಲ್ಲಿ ಪೋಷಕರು

ಚಿಕ್ಕಮಗಳೂರು: ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆ ತಾಲೂಕಿನಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರ (Fever) ಆತಂಕ ಮೂಡಿಸಿದೆ. ಒಂದೇ ಊರಿನ ಇಬ್ಬರು ಮಕ್ಕಳು ಸೇರಿದಂತೆ 8 ತಿಂಗಳ ಶಿಶು ಜ್ವರಕ್ಕೆ ಬಲಿಯಾಗಿದೆ. 20 ಕ್ಕೂ ಅಧಿಕ ಮಕ್ಕಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಧಾರಾಕಾರವಾಗಿಸುರಿಯುತ್ತಿದೆ. ವಾಡಿಕೆ ಪ್ರಮಾಣಕ್ಕಿಂತ ಶೇ 90ಕ್ಕಿಂತ ಹೆಚ್ಚು ಸುರಿದಿರುವ ಮಳೆ ಕೊಂಚ ಬಿಡುವು ನೀಡಿ ಸೂರ್ಯನ ದರ್ಶನ ಮಾಡಿಸಿ, ಮತ್ತೆ ಆರ್ಭಟಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆಯಲ್ಲಿ ಮಳೆಗಾಲದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರ ಪೋಷಕರನ್ನ ಕಂಗಾಲು ಮಾಡಿದೆ.
ಮೂಡಿಗೆರೆ ತಾಲೂಕಿನಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಜ್ವರ ಕಾಣಿಸಿಕೊಳ್ಳುತ್ತಿದ್ದು. ಜ್ವರಕ್ಕೆ ಮೂವರು ಮಕ್ಕಳು ಮೃತಪ್ಪಟಿದ್ದಾರೆ. ಚಿಕ್ಕಮಗಳೂರು ಹಾಸನ , ಶಿವಮೊಗ್ಗ ಆಸ್ಪತ್ರೆಗಳ ಐಸಿಯುನಲ್ಲಿ 16ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದರೇ, ಸಾವಿರಾರು ಮಕ್ಕಳಲ್ಲಿ ಜ್ವರದ ಲಕ್ಷಣ ಕಾಣಿಸುತ್ತಿದೆ.
ಮಳೆಗಾಲದಲ್ಲಿ ಜ್ವರ, ಶೀತ, ಕೆಮ್ಮಿನ ಲಕ್ಷಣಗಳು ಕಾಣಿಸಿಕೊಳ್ಳುವುದು ಸಹಜ. ಆದರೆ, ಈ ವರ್ಷ ತೀವ್ರ ಸ್ವರೂಪದಲ್ಲಿ ಅದರಲ್ಲೂ 12 ವರ್ಷದ ಮಕ್ಕಳಲ್ಲಿ ಹೆಚ್ಚು ಜ್ವರ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿದೆ. ಮೂಡಿಗೆರೆ ತಾಲೂಕಿನ ಹೆಸ್ಗಲ್ ಗ್ರಾಮದಲ್ಲಿ 11 ವರ್ಷದ ಬಾಲಕಿ ಪ್ರೇರಣಾ, 4 ವರ್ಷದ ಬಾಲಕಿ ಸಾರ ತೀವ್ರ ಜ್ವರಕ್ಕೆ ಬಲಿಯಾಗಿದ್ದಾರೆ. ಇನ್ನು ನಂದೀಪುರ ಗ್ರಾಮದ ಸುನೀಲ್ ಮತ್ತು ಸುಮತಿ ದಂಪತಿಯ 8 ತಿಂಗಳ ಮಗು ಕೂಡ ಜ್ವರದಿಂದ ಸಾವನ್ನಪ್ಪಿದೆ.
ಮೊದಲು ಶೀತ, ಅಲ್ಪ ಜ್ವರ, ಕೆಮ್ಮು ಕಾಣಿಸಿಕೊಂಡು ಮೂರು ನಾಲ್ಕು ದಿನದಲ್ಲಿ ಜ್ವರದ ಸ್ವರೂಪ ಬದಲಾಗಿ , ಮಕ್ಕಳನ್ನ ಅಸ್ವಸ್ಥ ಮಾಡುತ್ತಿದ್ದು ಪೋಷಕರಲ್ಲಿ ಸಾಂಕ್ರಾಮಿಕ ರೋಗದ ಆತಂಕ ಆರಂಭವಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಅಶ್ವಥ್ ಬಾಬು ಅವರ ಸೂಚನೆ ಮೇರೆಗೆ ಮೂಡಿಗೆರೆ ತಾಲೂಕು ಆರೋಗ್ಯ ಅಧಿಕಾರಿ ಜ್ವರದಿಂದ ಸಾವನ್ನಪ್ಪಿದ ಮಕ್ಕಳು, ಸೇರಿದಂತೆ ಜ್ವರದಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಲು ತಂಡ ರಚನೆ ಮಾಡಿದ್ದಾರೆ.
ಯಾವುದೇ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳದೆ ಇದ್ದರೂ ಮಕ್ಕಳು ಜ್ವರಕ್ಕೆ ಬಲಿಯಾಗಿರುವುದು ಮೂಡಿಗೆರೆ ತಾಲೂಕಿನಲ್ಲಿ ಆತಂಕ ಸೃಷ್ಟಿ ಮಾಡಿದೆ. ಮಕ್ಕಳಲ್ಲಿ ಕಾಣಿಸಿಕೊಂಡ ಜ್ವರದ ಬಗ್ಗೆ ಅರೋಗ್ಯ ಇಲಾಖೆ ತನಿಖೆ ನಡೆಸುವಂತೆ ಮೂಡಿಗೆರೆ ಜನತೆ ಆಗ್ರಹಿಸಿದ್ದಾರೆ.
