ತೆಂಡೂಲ್ಕರ್ ಮನೆಯಲ್ಲಿ ಸಂಭ್ರಮದ ಹಬ್ಬ; ಬಾಲ್ಯದ ಗೆಳತಿ ಸಾನಿಯಾ ಚಾಂದೋಕ್ ಕೈಹಿಡಿದ ಅರ್ಜುನ್

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ತಮ್ಮ ಬಹುದಿನಗಳ ಗೆಳತಿ ಸಾನಿಯಾ ಚಾಂದೋಕ್ (Sania Chandok) ಅವರೊಂದಿಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಆಗಸ್ಟ್ನಲ್ಲಿ ತೀರ ಖಾಸಗಿಯಾಗಿ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಾಗೆಯೇ ಮಾರ್ಚ್ 3 ರಂದು ಮುಂಬೈನ ಮಹಾಲಕ್ಷ್ಮಿ ರೇಸ್ ಕೋರ್ಸ್‌ನಲ್ಲಿ ಮೆಹಂದಿ ಸಮಾರಂಭವು ನಡೆದಿತ್ತು. ಆ ಸಮಾರಂಭದಲ್ಲಿ ಕ್ರಿಕೆಟ್ ಜಗತ್ತಿನ ಅನೇಕ ದಂತಕಥೆಗಳು ಉಪಸ್ಥಿತರಿದ್ದರು. ಸಚಿನ್ ಅವರ ಆಪ್ತರು, ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳು ಮೆಹಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು, ಅವರಲ್ಲಿ ರವಿಶಾಸ್ತ್ರಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಅಜಿತ್ ಅಗರ್ಕರ್ ಸೇರಿದ್ದ್ದರು. ಇದೀಗ ಮದುವೆಗೆ ಅತಿಥಿಗಳ ಮಹಾಪೂರವೇ ಹರಿದುಬಂದಿತ್ತು.
ಮದುವೆಯಲ್ಲಿ ಗಣ್ಯರ ಉಪಸ್ಥಿತಿ
ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ಮುಂಬೈನಲ್ಲಿ ನೆರವೇರಿತು. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿಯೊಂದಿಗೆ ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡರು. ಮಾಜಿ ಕ್ರಿಕೆಟಿಗ ಮತ್ತು ಆಯ್ಕೆದಾರ ಅಜಿತ್ ಅಗರ್ಕರ್ ಕೂಡ ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದರು. ರಾಹುಲ್ ದ್ರಾವಿಡ್ ಅವರ ಪತ್ನಿ ವಿಜೇತಾ ಪೆಂಧಾರ್ಕರ್, ಕಿರಣ್ ಮೋರೆ, ಅನಿಲ್ ಕುಂಬ್ಳೆ, ಅಜಿಂಕ್ಯ ರಹಾನೆ, ಸುರೇಶ್ ರೈನಾ ಮತ್ತು ವೆಂಕಟೇಶ್ ಪ್ರಸಾದ್ (ಮಾಜಿ ಕ್ರಿಕೆಟಿಗ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ) ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ವಿವಾಹ ಸಮಾರಂಭದಲ್ಲಿ ರಾಜಕೀಯ ವ್ಯಕ್ತಿಗಳು ಕೂಡ ಭಾಗವಹಿಸಿದ್ದರು. ಕೆಲವು ದಿನಗಳ ಹಿಂದೆ ಸಚಿನ್ ತೆಂಡೂಲ್ಕರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿದ್ದರು. ಕ್ರೀಡಾ ತಾರೆಯರು, ಕೈಗಾರಿಕೋದ್ಯಮಿಗಳು ಮತ್ತು ಪ್ರಮುಖ ವ್ಯಕ್ತಿಗಳು ಸಹ ಭಾಗವಹಿಸಿದ್ದರು, ಇದು ಕಾರ್ಯಕ್ರಮವನ್ನು ಇನ್ನಷ್ಟು ಅದ್ದೂರಿಯಾಗಿ ಮಾಡಿತು.ಅರ್ಜುನ್- ಸಾನಿಯಾ ಬಗ್ಗೆ ಕಿರುಪರಿಚಯ
ಅರ್ಜುನ್ ತೆಂಡೂಲ್ಕರ್ ದೇಶಿ ಕ್ರಿಕೆಟ್ನಲ್ಲಿ ಗೋವಾ ಪರ ಆಡುತ್ತಿದ್ದು, ಐಪಿಎಲ್‌ನಲ್ಲಿ ಇಷ್ಟು ವರ್ಷ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಇದೀಗ ಅವರು ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದಾರೆ. ಇತ್ತ ಸಾನಿಯಾ, ಮುಂಬೈ ಮೂಲದ ಕೈಗಾರಿಕೋದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಸಾನಿಯಾ ಮುಂಬೈ ಮೂಲದ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ ಎಲ್‌ಎಲ್‌ಪಿಯಲ್ಲಿ ನಿಯೋಜಿತ ಪಾಲುದಾರೆ ಮತ್ತು ನಿರ್ದೇಶಕಿಯೂ ಆಗಿದ್ದಾರೆ. ಹಾಗೆಯೇ ಅರ್ಜುನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳತಿಯೂ ಆಗಿರುವ ಸಾನಿಯಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದಿದ್ದಾರೆ.
