ಕಳ್ಳತನದ ಆರೋಪದ ಭೀತಿ; ತೆಂಗಿನ ಮರ ಏರಿ ಕುಳಿತ ಯುವಕ, ಮೂರು ಗಂಟೆ ಹೈಡ್ರಾಮಾ

ಗದಗ: ಇಲ್ಲಿನ ವಿವೇಕಾನಂದ ನಗರ ಬಡಾವಣೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಹೈಡ್ರಾಮಾ ನಡೆದಿದೆ. ಕಳ್ಳತನದ ಆರೋಪದ ಮೇಲೆ ಗ್ರಾಮಸ್ಥರು ಬೆನ್ನಟ್ಟಿದಾಗ, ಯುವಕ ಭಯದಿಂದ ತೆಂಗಿನ ಮರವೇರಿ ಕುಳಿತ ಘಟನೆ ನಡೆದಿದೆ.

ಬಸವರಾಜ್ ಸೊಲ್ಲಾಪುರ ಎಂಬ ಯುವಕ ಸುಮಾರು 40 ಅಡಿ ಎತ್ತರದ ತೆಂಗಿನ ಮರವನ್ನು ಏರಿ ಕುಳಿತಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯ ಕಬ್ಬೂರು ಗ್ರಾಮದ ನಿವಾಸಿಯಾಗಿರುವ ಬಸವರಾಜ್, ನಸುಕಿನ ಜಾವ ರೈಲಿನಲ್ಲಿ ಬಂದು ಗದಗದಲ್ಲಿ ಇಳಿದಿದ್ದ. ನಂತರ ವಿವೇಕಾನಂದ ಬಡಾವಣೆಯ ಮನೆ ಬಾಗಿಲು ಬಡಿದಿದ್ದ ಎನ್ನಲಾಗಿದೆ.
ಇದರಿಂದ ಭಯಗೊಂಡ ಸ್ಥಳೀಯರು ಆತನನ್ನು ಕಳ್ಳ ಎಂದು ಶಂಕಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ವಾಹನದ ಸೈರನ್ ಶಬ್ದ ಕೇಳುತ್ತಿದ್ದಂತೆ ಭಯಗೊಂಡ ಬಸವರಾಜ್, ತಪ್ಪಿಸಿಕೊಳ್ಳಲು ತೆಂಗಿನ ಮರ ಏರಿದ್ದ.
ಸ್ಥಳೀಯರು ಕೆಳಗೆ ಇಳಿಯುವಂತೆ ಸಾಕಷ್ಟು ಮನವಿ ಮಾಡಿಕೊಂಡರೂ ಇಳಿಯದೇ ಸುಮಾರು ಎರಡರಿಂದ ಮೂರು ಗಂಟೆಗೂ ಹೆಚ್ಚು ಕಾಲ ಮರದಲ್ಲೇ ಕುಳಿತಿದ್ದ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಆತನನ್ನು ಕೆಳಗಿಳಿಸಿದ್ದಾರೆ. ನಂತರ ಯುವಕನನ್ನು ಬೆಟಗೇರಿ ಬಡಾವಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.