ಭಾರತದ ಪರ ನಿಂತಿದ್ದ ಅಮೇರಿಕಾದ ಬೋಲ್ಟನ್ ಮನೆಗೆ ಎಫ್‌ಬಿಐ ದಾಳಿ

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ತನಿಖಾ ಸಂಸ್ಥೆಯಾದ ಎಫ್.ಬಿ.ಐ.ನ (‘ಫೆಡರೇಶನ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್’) ತಂಡವು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರ ಮನೆಯ ಮೇಲೆ ದಾಳಿ ಮಾಡಿದೆ.

ಈ ಕ್ರಮವು ಗೌಪ್ಯ ದಾಖಲೆಗಳ ಹಳೆಯ ತನಿಖೆಗೆ ಸಂಬಂಧಿಸಿದೆ. ಎಫ್.ಬಿ.ಐ.ನ ಮುಖ್ಯಸ್ಥ ಕಾಶ್ ಪಟೇಲ್ ಅವರ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯ ನಂತರ ಪಟೇಲ್ ತಕ್ಷಣವೇ ‘ಎಕ್ಸ್’ನಲ್ಲಿ ಒಂದು ಪೋಸ್ಟ್‌ನಲ್ಲಿ, ‘ಕಾನೂನಿಗಿಂತ ಯಾರೂ ದೊಡ್ಡವರಲ್ಲ…’ ಎಂದು ಬರೆದಿದ್ದಾರೆ. ಬೋಲ್ಟನ್ ಅವರು ಟ್ರಂಪ್ ಅವರ ನೀತಿಗಳನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ ಮತ್ತು ಆಮದು ಸುಂಕದ ವಿಷಯದಲ್ಲಿ ಭಾರತದ ಪರವಾಗಿ ಮಾತನಾಡುತ್ತಿದ್ದಾರೆ.
ಜಾನ್ ಬೋಲ್ಟನ್ ಟ್ರಂಪ್ ಅವರ ವಿದೇಶಾಂಗ ಮತ್ತು ರಾಷ್ಟ್ರೀಯ ಭದ್ರತಾ ನೀತಿಗಳನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ. ಇತ್ತೀಚೆಗೆ, ಅವರು ರಷ್ಯಾದಿಂದ ತೈಲ ಖರೀದಿಸಲು ಭಾರತದ ಮೇಲೆ ಸುಂಕ ವಿಧಿಸುವ ಟ್ರಂಪ್ ಅವರ ನಿರ್ಧಾರ ತಪ್ಪಾಗಿದೆ ಎಂದು ಹೇಳಿದ್ದರು. ರಷ್ಯಾದಿಂದ ತೈಲ ಖರೀದಿಸಲು ಕೇವಲ ಭಾರತದ ಮೇಲೆ ಸುಂಕ ವಿಧಿಸುವುದು ತಪ್ಪು ಎಂದು ಬೋಲ್ಟನ್ ಹೇಳಿದ್ದರು. ಚೀನಾ ಕೂಡ ರಷ್ಯಾದಿಂದ ತೈಲ ಖರೀದಿಸುತ್ತದೆ, ಆದರೆ ಅದರ ಮೇಲೆ ಯಾವುದೇ ಸುಂಕ ವಿಧಿಸಲಾಗುವುದಿಲ್ಲ. ಟ್ರಂಪ್ ಅವರ ಈ ನಿರ್ಧಾರದಿಂದ ಅಮೆರಿಕ ಭಾರತವನ್ನು ಕೈಬಿಟ್ಟಂತಾಗಿದೆ ಮತ್ತು ಇದರಿಂದ ಭಾರತವು ರಷ್ಯಾ ಮತ್ತು ಚೀನಾದ ಹತ್ತಿರವಾಗಬಹುದು, ಎಂದು ಹೇಳಿದ್ದಾರೆ.
