ಪೊಲೀಸರ ನಿರ್ಲಕ್ಷ್ಯಕ್ಕೆ ಕಂಗಾಲಾಗಿ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ


ಚಿತ್ರದುರ್ಗ: ಗೊತ್ತುಗುರಿಯಿಲ್ಲದ ಯುವಕನ ಜತೆ ಮಗಳು ಓಡಿಹೋಗಿದ್ದು, ಹೇಗಾದರೂ ಮಾಡಿ ಒಮ್ಮೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಪೊಲೀಸರ ಬಳಿ ಪದೇ ಪದೇ ಕಾಡಿದ ವ್ಯಕ್ತಿಯೊಬ್ಬರು ಫಲ ಕಾಣದೆ ಪೊಲೀಸ್ ಠಾಣೆ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದಾರುಣ ಘಟನೆ ನಡೆದಿರುವುದು ಚಿತ್ರದುರ್ಗದ ಹೊಳಲ್ಕೆರೆ ಠಾಣೆಯಲ್ಲಿ. ಪೊಲೀಸರ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸ್ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಲಾಯಿತು. ಜನರನ್ನು ಚದುರಿಸಲು ಲಾಠಿಚಾರ್ಜ್ ಕೂಡ ನಡೆಸಲಾಯಿತು.
ಹೊಳಲ್ಕೆರೆಯಲ್ಲಿ ನಡೆದಿದ್ದೇನು?
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಗಿಲ್ಕೇನಹಳ್ಳಿಯ ಅಜ್ಜಯ್ಯ(51) ಮೃತ ದುರ್ದೈವಿ. ಅಜ್ಜಯ್ಯನ ಪ್ರೀತಿಯ ಮಗಳು ವಾರದ ಹಿಂದೆ ಗೊತ್ತು ಗುರಿಯಿಲ್ಲದ ಯುವಕ ರಘು ಎಂಬಾತನ ಜತೆ ಮನೆ ಬಿಟ್ಟು ಹೋಗಿದ್ದಾಳೆ. ಹೀಗಾಗಿ, ಮೊದಲೇ ನೊಂದಿದ್ದ ಅಜ್ಜಯ್ಯ, ಕಳೆದ ಒಂದು ವಾರದಿಂದ ಹೊಳಲ್ಕೆರೆ ಠಾಣೆಗೆ ಅಲೆದಿದ್ದಾರೆ. ಮಗಳನ್ನು ಒಮ್ಮೆ ಕರೆಸಿ ಮಾತಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಹೊಳಲ್ಕೆರೆ ಠಾಣೆ ಸಿಪಿಐ ಚಿಕ್ಕಣ್ಣವರ್ ಮತ್ತು ಪಿಎಸ್ಐ ಸಚಿನ್ ಮಾತ್ರ ನಿರ್ಲಕ್ಷ್ಯ ತೋರಿದ್ದಾರೆ. ಆಮೇಲೆ ಬನ್ನಿ, ನಾಳೆ ಬನ್ನಿ ಎಂದು ಅಲೆಸಿದ್ದಾರೆ. ಅಷ್ಟು ಸಾಲದೆಂಬಂತೆ ಪೊಲೀಸರು ಅಜ್ಜಯ್ಯನಿಗೆ ಮತ್ತಷ್ಟು ಅವಮಾನ, ನೋವು ನೀಡುವಂತೆ ಮಾತನಾಡಿದ್ದರು ಎಂಬ ಆರೋಪವೂ ಇದೆ. ಇದರಿಂದ ಮನನೊಂದ ಅಜ್ಜಯ್ಯ ಭಾನುವಾರ ಸಂಜೆ ವೇಳೆ ಹೊಳಲ್ಕೆರೆ ಠಾಣೆ ಎದುರೇ ವಿಷ ಸೇವಿಸಿದ್ದಾರೆ. ಗಮನಿಸಿದ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಅಜ್ಜಯ್ಯ ಕೊನೆಯುಸಿರೆಳೆದಿದ್ದಾರೆ.
ಅಜ್ಜಯ್ಯ ಬೆಂಗಳೂರಿಗೆ ಹೋಗಿ ಕೂಲಿ ಕೆಲಸ ಮಾಡಿಕೊಂಡಿದ್ದ ಬಡವ. ಬಡತನದಲ್ಲೇ ಮಕ್ಕಳನ್ನು ಪ್ರೀತಿಯಿಂದ ಸಾಕಿದ್ದರು. ಆರೆ, ಏಕಾಏಕಿ ಮಗಳು ಮನೆ ಬಿಟ್ಟು ಯುವಕನ ಜತೆ ಹೋಗಿ ಮದುವೆ ಆಗಿದ್ದಾಳೆಂದು ತಿಳಿದು ಕಂಗಾಲಾಗಿದ್ದರು. ಒಂದು ಸಲ ಕರೆಸಿ ಮತಾಡಲು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಅಂಗಲಾಚಿದ್ದರು. ಮಗಳಿಗಿನ್ನೂ ವಯಸ್ಸು 18 ತುಂಬಿಲ್ಲ, ನನ್ನ ಬಳಿ ಬರ್ತ್ ಸರ್ಟಿಫಿಕೇಟ್ ಇದೆ ಎಂದು ಸಹ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ಆದರೆ, ಅಧಿಕಾರಿಗಳು ಕ್ಯಾರೇ ಅನ್ನದ ಕಾರಣ ನೊಂದು ಠಾಣೆ ಎದುರೇ ವಿಷ ಸೇವನೆಗೆ ನಿರ್ಧರಿಸಿದ್ದಾರೆ.
ವಿಷಸೇವನೆಗೂ ಅರ್ಧಗಂಟೆ ಮುನ್ನ ನನಗೆ ಕರೆ ಮಾಡಿ, ‘ಪೊಲೀಸ್ ಅಧಿಕಾರಿಗಳಿಂದ ನ್ಯಾಯ ಸಿಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಿದ್ದರು. ಸಮಾಧಾನ ಹೇಳಿದರೂ ಕೇಳದೆ ಅಪಮಾನದಿಂದ ನೊಂದು ವಿಷ ಸೇವಿಸಿದ್ದಾರೆ ಎಂದು ಮೃತನ ಸಂಬಂಧಿ ಪ್ರಶಾಂತ್ ಎಂಬವರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎದು ಅಜ್ಜಯ್ಯನ ಸಂಬಂಧಿಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
