ಆಸ್ತಿ ವಿವಾದ, ಸಾಲಬಾಧೆ; ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಂದೆ ಆತ್ಮಹತ್ಯೆ, ಪತ್ನಿ ಪಾರು

ಆಸ್ತಿ ಮಾರಾಟ ಮಾಡಿದ್ದ ಹಣ ಒಡಹುಟ್ಟಿದ ಸಹೋದರ ಹಿಂತುರುಗಿಸದೇ ಕಾಡಿಸುತ್ತಿರುವ ಹಿನ್ನೆಲೆ ಮನನೊಂದು ಮೂವರು ಪುಟ್ಟ ಪುಟ್ಟ ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ, ಅದೃಷ್ಟವಶಾತ್ ಬದುಕಿದ ತಾಯಿ ಕರಳು ಕಿತ್ತು ಬರುವಂತೆ ಕಣ್ಣೀರು ಹಾಕುತ್ತಿದ್ದಾಳೆ, ಸಾಲಭಾದೆಯಿಂದ ಮನೆ ಮಠ ಬಿಟ್ಟು ದರ್ಗಾ ಸೇರಿಕೊಂಡ ಕುಟುಂಬ ಆತ್ಮಹತ್ಯೆ ನಿರ್ಧರಿಸಿ ಹರಿಯುತ್ತಿರುವ ಕಾಲುವೆಗೆ ಹಾರಿದ ಕುಟುಂಬವೊಂದರ ಕಣ್ಣಿರಿನ ಕಥೆ.

ಹೀಗೆ ಅದೆ ಬಡಿದುಕೊಂಡು ಗೋಳಾಡಿ ಕಣ್ಣೀರು ಹಾಕುತ್ತಿರುವ ಈ ಮಹಿಳೆ ಸಾವಿನ ದವಡೆಯಿಂದ ಜಸ್ಟ್ ಮಿಸ್ ಆಗಿ ಪಾರಾಗಿ ಬಂದ ಮಹಿಳೆ, ಆಸ್ತಿ ವಿವಾದ ಮತ್ತು ಸಾಲಬಾಧೆಯಿಂದ ಬೇಸತ್ತು ತೆಗೆದುಕೊಂಡ ದುಡುಕಿನ ನಿರ್ಧಾರಕ್ಕೆ ತಂದೆ ಮತ್ತು ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ.
ಈ ಘೋರ ದುರಂತದಿಂದ ಇಡೀ ಜಿಲ್ಲೆಯೇ ಒಂದು ಕ್ಷಣ ಬೆಚ್ಚಿಬಿದ್ದಿದೆ, ಬದುಕುಳಿದ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು, ಸಾಲದ ಸುಳಿಗೆ ಸಿಲುಕಿ ಮನೆ, ಮಠ ಬಿಟ್ಟು ಭಾಲ್ಕಿ ತಾಲೂಕಿನ ಮರೂರ ಗ್ರಾಮದ ದರ್ಗಾದಲ್ಲಿ ಆಶ್ರಯ ಪಡೆದಿದ್ದ ಶಿವಮೂರ್ತಿ ಕುಟುಂಬದ ಅರಣ್ಯ ರೋದನ ಕಥೆ ಇದು.
ಮನನೊಂದು ತೆಗೆದುಕೊಂಡ ನಿರ್ಧಾರದಿಂದ ಬಾಳಿ ಬದುಕಬೇಕಾದ ತಂದೆ ಜೊತೆ ಮೂವರು ಕಂದಮ್ಮಗಳು ಸಾವನಪ್ಪಿವೆ ತಂದೆ ಶಿವಮೂರ್ತಿ ಮಾರುತಿ(45), ರಿತೀಕ್(04), ರಾಕೇಶ್(07), ಶ್ರೀಶಾಂತ್(09) ಹೀಗೆ ಮೂವರು ಮಕ್ಕಳೊಂದಿಗೆ ಕಾಲುವೆ ಪಾಲಾಗಿದ್ದಾರೆ, ಈ ಪ್ರಕರಣದಲ್ಲಿ ಶಿವಮೂರ್ತಿ ಅಣ್ಣಾನೆ ವಿಲನ್ ಆಗಿದ್ದಾನೆಂದು ಬದುಕುಳಿದ ತಾಯಿ ಕಣ್ಣೀರು ಹಾಕಿದ್ದಾರೆ.
ನನ್ನ ತಂಗಿ ನನ್ನ ಬಾವ ಸಾಯಬೇಕಿತ್ತು, ಆದರೆ ಚಿಕ್ಕ ಮುಗ್ದ ಮಕ್ಕಳು ಸಾವನ್ನಪ್ಪಿರುವುದು ದುರಂತ, ಹಣ ಕೊಡದ ನೀವು ಚೆನ್ನಾಗಿರಿ ಎಂದು ದುಃಖದಲ್ಲಿ ಹೇಳಿದರು. ತನಗೆ ಹೆಣ್ಣು ಮಕ್ಕಳಿಲ್ಲ ಎಂದು ದೊಡ್ಡಣ್ಣನ ಹೆಣ್ಣು ಮಕ್ಕಳಿಗೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದ ತಮ್ಮ ಶಿವಮೂರ್ತಿಗೆ ಇನ್ನೊಬ್ಬ ಅಣ್ಣ ಸುರೇಶ್ ವಿಲನ್ ಆಗಿದ್ದಾನೆ.
ಶಿವಮೂರ್ತಿಗೆ ಆದ ಸಾಲ ತೀರಿಸಲಾಗದೇ ತಾವು ವಾಸ ಇರುವ ಮನೆ ನಡುವಿನ ಅಣ್ಣ ಸುರೇಶ್ ಗೆ ಮಾರಾಟ ಮಾಡಿದ್ದನಂತೆ, 4 ಲಕ್ಷಕ್ಕೆ ಮನೆ ಖರೀದಿಸಿದ್ದ ಅಣ್ಣ ಸುರೇಶ್ ಮುಂಗಡವಾಗಿ 1 ಲಕ್ಷ ಹಣ ಕೊಟ್ಟು ಉಳಿದ ಹಣ ವಾಪಸ್ ನೀಡದೇ ಮೂರು ವರ್ಷದಿಂದ ಸತಾಯಿಸುತ್ತಿದ್ದ ಎನ್ನಲಾಗಿದೆ.
ಇದರ ಪರಿಣಾಮ ಸಾಲಗಾರರ ಕಾಟ ತಾಳಲಾರದೇ ಪತ್ನಿಯ ಊರಲ್ಲಿ ಹೋಗಿ ವಾಸವಾಗಿದ್ದರಂತೆ. ಅಲ್ಲಿಯೂ ಸಾಲಗಾರರ ಕಾಟದಿಂದ ಕೆಲ ದಿನಗಳಿಂದ ಭಾಲ್ಕಿಯ ಮರೂರ ದರ್ಗಾಕ್ಕೆ ಬಂದಿದ್ದರು. ಅಲ್ಲಿಯೇ ಕುಟುಂಬ ಆತ್ಮಹತ್ಯೆಗೆ ನಿರ್ಧಿರಿಸಿದ್ದ ಶಿವಮೂರ್ತಿಗೆ ನಾವು ಉಳಿದು ಏನೂ ಮಾಡೋಣ ಎಂದ ಪತ್ನಿ ಮಾತಿಗೆ ಕುಟುಂಬ ಸಮೇತ ಆತ್ಮಹತ್ಯೆಗೆ ನಿರ್ಧಿರಿಸಿದ್ದಾರಂತೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಎಸ್ಪಿ ಪ್ರದೀಪ್ ಗುಂಟಿ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ, ಆಸ್ತಿ ಖರೀದಿಸಿರುವ ಅಣ್ಣನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ, ಆದರೆ ಅದೇನೇ ಆಗಲಿ ಈ ದಂಪತಿ ತೆಗೆದುಕೊಂಡ ಆತ್ಮಹತ್ಯೆಯ ನಿರ್ಧಾರಕ್ಕೆ ಬಾಳಿ ಬದುಕಬೇಕಿದ್ದ ಮಕ್ಕಳು ಬಲಿಯಾಗಿದ್ದು ಘೋರ ದುರಂತವೆ ಸರಿ.
