ಖಾಸಗಿ ಕಂಪನಿ ಆವರಣಕ್ಕೆ ಮತ್ತೆ ಜಾನುವಾರು ನುಗ್ಗಿಸಿದ ರೈತರು – ನೀರಿಗಾಗಿ ತೀವ್ರ ಪ್ರತಿಭಟನೆ!

ಕೊಪ್ಪಳ: ಜಾನುವಾರುಗಳಿಗೆ ಕುಡಿಯಲು ನೀರಿಲ್ಲ ಎಂದು ಆಕ್ರೋಶಗೊಂಡ ಕುರಿಗಾಯಿಗಳು ಖಾಸಗಿ ಕಂಪನಿ ಆವರಣದೊಳಗೆ ಮತ್ತೆ ಕುರಿ ಹಾಗೂ ಜಾನುವಾರು ನುಗ್ಗಿಸಿದ ಘಟನೆ ಶನಿವಾರ (ಜು.26) ಕೊಪ್ಪಳ ತಾಲೂಕಿನ ಬಸಾಪುರ ಬಳಿ ನಡೆದಿದೆ.

ಬಲ್ಡೋಟಾ ಕಂಪನಿಯ ಆವರಣದ ಒಳಗಡೆ ಸಾರ್ವಜನಿಕ ಕೆರೆಯಿದೆ.
ಕಂಪನಿ ಕೆರೆಯ ಸುತ್ತಲು ಕಂಪೌಂಡ್ ನಿರ್ಮಿಸಿದೆ. ಆದರೆ ಇದು ಸಾರ್ವಜನಿಕ ಕೆರೆ, ಕೆರೆಗೆ ಜಾನುವಾರು ನೀರು ಕುಡಿಯಲು ಬಿಡುವಂತೆ ಕುರಿಗಾಯಿಗಳು ಒತ್ತಾಯಿಸುತ್ತಿದ್ದಾರೆ.
ಶನಿವಾರವೂ ಜಾನುವಾರುಗಳಿಗೆ ನೀರು ಕುಡಿಸಲು ಅವಕಾಶ ನೀಡಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದರು. ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಜಾನುವಾರು ನೀರು ಕುಡಿಯಲು ಏನು ಮಾಡಬೇಕು. ಈ ಹಿಂದಿನಿಂದಲೂ ಇದೇ ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸುತ್ತಾ ಬಂದಿದ್ದೇವೆ ಎಂದು ಆಗ್ರಹಿಸಿದ್ದರು. ಆದರೆ ಜಾನುವಾರುಗಳಿಗೆ ನೀರು ಕುಡಿಯಲು ಬಿಡದ ಕಂಪನಿಯ ಸಿಬ್ಬಂದಿ, ಕುರಿಗಾಯಿಗಳ ಮೇಲೆ ಹಲ್ಲೆ ನಡೆಸಿತ್ತು.
ಇದರಿಂದ ರೊಚ್ಚಿಗೆದ್ದು ಇಂದು ಮತ್ತೆ ಸಾವಿರಾರು ಜಾನುವಾರುಗಳನ್ನು ರೈತರು ಕಂಪನಿಯೊಳಗೆ ನುಗ್ಗಿಸಿದ್ದಾರೆ.