ಮಗಳ ಶೈಕ್ಷಣಿಕ ದಾಖಲೆ ಕೇಳಿದ ರೈತನ ಹ*ತ್ಯೆ: ಶಾಲಾ ಆಡಳಿತದ ವಿರುದ್ಧ ಕ್ರಿಮಿನಲ್ ಕೇಸ್

ಮುಂಬೈ: ಮಗಳ ಸ್ಕೂಲ್ ಫೀಸ್ ಮರುಪಾವತಿಸುವಂತೆ ಕೇಳಿದ ರೈತನನ್ನು ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಹಾಗೂ ಆತನ ಪತ್ನಿ ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ.

ಜಗನ್ನಾಥ್ ಹೆಂಗ್ಡೆ (46) ಮೃತ ರೈತ ಎಂದು ಗುರುತಿಸಲಾಗಿದೆ. ಪೂರ್ಣದ ಝೀರೋ ಫಾಟಾ ಪ್ರದೇಶದಲ್ಲಿರುವ ವಸತಿ ಶಾಲೆಯೊಂದರಲ್ಲಿ ಅವರ ಮಗಳು ವ್ಯಾಸಂಗ ಮಾಡುತ್ತಿದ್ದಳು. ಬಳಿಕ ಕಾರಣಾಂತರಗಳಿಂದ ಮಗಳನ್ನು ಬೇರೆ ಶಾಲೆಗೆ ಸೇರಿಸಿದ್ದರು.
ಆದ್ದರಿಂದ ಜಗನ್ನಾಥ್ ಹೆಂಗ್ಡೆ ಅವರು ಮಗಳ ಶಾಲಾ ಶುಲ್ಕ ಮರುಪಾವತಿ ಮತ್ತು ವರ್ಗಾವಣೆ ಪ್ರಮಾಣಪತ್ರವನ್ನು ಕೇಳಲು ಹೋಗಿದ್ದರು. ಅವರು ಶಾಲೆಯ ಪೂರ್ತಿ ಶುಲ್ಕ ಪಾವತಿಸದ್ದರಿಂದ ಆಡಳಿತ ಮಂಡಳಿ ಮುಖ್ಯಸ್ಥ ಹಾಗೂ ಆತನ ಪತ್ನಿ ತರಾಟೆಗೆ ತೆಗೆದುಕೊಂಡಿದ್ದರು.
ಅಲ್ಲದೇ ಜಗನ್ನಾಥ್ ಅವರ ಮೇಲೆ ಇಬ್ಬರು ಅಮಾನುಷವಾಗಿ ಹಲ್ಲೆ ನಡೆಸಿದ್ದರು. ತೀವ್ರವಾಗಿ ಹಲ್ಲೆಗೊಳಗಾದ ಜಗನ್ನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ಮತ್ತು ರಾಜಕೀಯ ಪಕ್ಷವೊಂದರ ಜೊತೆ ಸಂಬಂಧ ಹೊಂದಿರುವ ಆತನ ಪತ್ನಿಯ ವಿರುದ್ಧ ಪ್ರಕರಣ ಪೂರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
