ಕುಂಪಲ ಡಿಮಾರ್ಟ್ ಕೆಲಸದ ಹೆಸರಲ್ಲಿ ನಕಲಿ ವದಂತಿ!

ಕುಂಪಲ–ಬೈಪಾಸ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಡಿಮಾರ್ಟ್ ಶಾಪಿಂಗ್ ಮಾಲ್ ಹೆಸರಿನಲ್ಲಿ ಹರಿದ ಸುಳ್ಳು ಉದ್ಯೋಗ ಜಾಹಿರಾತು ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವದಂತಿ ಕಾರಣದಿಂದ ಕೆಲಸದ ನಿರೀಕ್ಷೆಯಲ್ಲಿ ಬಂದವರು ನಿರಾಶೆಯೊಂದಿಗೆ ಹಿಂದಿರುಗುವಂತಾಗಿದೆ.


ದೇಶದ ಪ್ರಸಿದ್ಧ ಶಾಪಿಂಗ್ ಮಾಲ್ ಡಿಮಾರ್ಟ್ ಸಂಸ್ಥೆಯ ಹೊಸ ಶಾಖೆಯೊಂದು ಉಳ್ಳಾಲ ತಾಲೂಕಿನ ಕುಂಪಲ–ಬೈಪಾಸ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದೆ. ಈ ನಡುವೆ, ಡಿಮಾರ್ಟ್ ಶಾಪಿಂಗ್ ಮಾಲ್‌ನಲ್ಲಿ ಉದ್ಯೋಗಾವಕಾಶಗಳಿವೆ ಎಂಬ ಸುಳ್ಳು ಜಾಹಿರಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅನಕ್ಷರಸ್ಥರಿಂದ ಹಿಡಿದು ಪದವೀಧರರ ತನಕ ಉದ್ಯೋಗ ಅರಸಿ ನೂರಾರು ಮಂದಿ ಮಾಲ್ ಕಡೆಗೆ ಧಾವಿಸಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ವಾಟ್ಸಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಜಾಹಿರಾತಿನಲ್ಲಿ ಯಾವುದೇ ಅಧಿಕೃತ ಫೋನ್ ನಂಬರ್ ಅಥವಾ ಈಮೇಲ್ ವಿಳಾಸ ಉಲ್ಲೇಖಿಸದೇ ಇದ್ದರೂ, ಅನೇಕರು ಪರಿಶೀಲನೆ ಮಾಡದೇ ಅದನ್ನು ಫಾರ್ವರ್ಡ್ ಮಾಡಿದ್ದು, ತಮ್ಮ ಸ್ಟೇಟಸ್‌ಗಳಲ್ಲೂ ಅಪ್ಲೋಡ್ ಮಾಡಿದ್ದಾರೆ.
ಈ ಜಾಹಿರಾತನ್ನು ನಂಬಿ ನಿನ್ನೆ ಮತ್ತು ಇಂದು ಕುಂಪಲ–ಬೈಪಾಸ್‌ನ ಡಿಮಾರ್ಟ್ ಎದುರು ನೂರಾರು ಮಂದಿ ಸೇರಿದ್ದು, ಕೆಲಸಕ್ಕಾಗಿ ಮುಗಿ ಬಿದ್ದಿದ್ದಾರೆ. ಆದರೆ ಡಿಮಾರ್ಟ್ ಸಂಸ್ಥೆಯು ಯಾವುದೇ ಉದ್ಯೋಗ ಜಾಹಿರಾತು ನೀಡಿಲ್ಲ ಎಂದು ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಉದ್ಯೋಗ ನಿರೀಕ್ಷೆಯಲ್ಲಿ ಬಂದವರಿಗೆ ತೀವ್ರ ನಿರಾಶೆ ಎದುರಾಗಿದೆ.