ನಕಲಿ ಉದ್ಯೋಗ ಭರವಸೆ- ಬಿಹಾರಕ್ಕೆ ಕರೆದೊಯ್ಯುತ್ತಿದ್ದ 56 ಯುವತಿಯರ ರಕ್ಷಣೆ

ಸಿಲಿಗುರಿ: ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಬಿಹಾರಕ್ಕೆ ರೈಲಿನಲ್ಲಿ ಕೊಂಡೊಯ್ಯುತ್ತಿದ್ದ 56 ಮಂದಿ ಯುವತಿಯರನ್ನು ಪಶ್ಚಿಮ ಬಂಗಾಳದ ನ್ಯೂಜಲಪಾಯಿಗುರಿಯಲ್ಲಿ ರಕ್ಷಿಸಲಾಗಿದೆ ಹಾಗೂ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

18ರಿಂದ 31 ವರ್ಷದ ಒಳಗಿನ ಈ ಯುವತಿಯರನ್ನು ನ್ಯೂಜಲಪಾಯಿಗುರಿ-ಪಾಟ್ನಾ ಕ್ಯಾಪಿಟಲ್ ಎಕ್ಸ್‌ಪ್ರೆಸ್ ರೈಲಿನಿಂದ ಸೋಮವಾರ ತಡರಾತ್ರಿ ರಕ್ಷಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ಈ ಯುವತಿಯರು ಪಶ್ಚಿಮಬಂಗಾಳದ ಜಲಪಾಯ್‌ಗುರಿ,ಕೂಚ್ ಬೆಹಾರ್ ಹಾಗೂ ಅಲಿಪುರುದುವಾರ್ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಅವರಿಗೆ ಬೆಂಗಳೂರಿನಲ್ಲಿರುವ ಕಂಪೆನಿಯೊಂದರಲ್ಲಿ ಉದ್ಯೋಗ ಕೊಡಿಸುವ ಸುಳ್ಳು ಭರವಸೆ ನೀಡಿ ಬಿಹಾರಕ್ಕೆ ಸಾಗಿಸಲಾಗುತ್ತಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಈ ಮಹಿಳೆಯರ ಪೈಕಿ ಯಾರಲ್ಲೂ ಕೂಡಾ ಟಿಕೆಟ್‌ಗಳಿರಲಿಲ್ಲ. ಕೇವಲ ಕೋಚ್ ಹಾಗೂ ಬರ್ತ್ ಸಂಖ್ಯೆಗಳನ್ನು ಅವರ ಕೈಗಳ ಮೇಲೆ ಮುದ್ರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ರೈಲ್ವೆ ಪೊಲೀಸ್ ಪಡೆಯ ಸಿಬ್ಬಂದಿ ಎಂದಿನಂತೆ ರೈಲಿನಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಭಾರೀ ಸಂಖ್ಯೆಯ ಮಹಿಳೆಯರು ಒಟ್ಟಾಗಿ ಪ್ರಯಾಣಿಸುತ್ತಿರುವುದು ಕಂಡು ಸಂಶಯಗೊಂಡರು. ಆನಂತರ ಅವರನ್ನು ಪ್ರಶ್ನಿಸಿದಾಗ ವಿಷಯ ಬೆಳಕಿಗೆ ಬಂದಿತೆಂದು ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿ ಓರ್ವ ಪುರುಷ ಹಾಗೂ ಇನ್ನೋರ್ವ ಮಹಿಳೆಯನ್ನು ಸ್ಥಳದಲ್ಲೇ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ, ಬಿಹಾರಕ್ಕೆ ಯಾಕೆ ಮಹಿಳೆಯರನ್ನು ಕರೆದೊಯ್ಯಲಾಗುತ್ತಿದೆ ಎಂಬ ಪ್ರಶ್ನೆಗೂ ಆರೋಪಿಗಳು ಉತ್ತರಿಸಲು ವಿಫಲರಾದರು ಹಾಗೂ ಉದ್ಯೋಗ ನೇಮಕಾತಿಯ ಯಾವುದೇ ದಾಖಲೆಗಳನ್ನು ಕೂಡಾ ಹಾಜರುಪಡಿಸಲಿಲ್ಲವೆಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಇದೊಂದು ಮಾನವಕಳ್ಳಸಾಗಣೆ ಪ್ರಕರಣವೆಂದು ಶಂಕಿಸಲಾಗಿದ್ದು, ಸರಕಾರಿ ರೈಲ್ವೆ ಪೊಲೀಸ್ ಹಾಗೂ ರೈಲ್ವೆ ರಕ್ಷಣಾ ಪಡೆ ಜಂಟಿಯಾಗಿ ತನಿಖೆ ನಡೆಸುತ್ತಿದೆ.
