ಸ್ಪೈ ಆಪ್ ಬಳಸಿ ಭಕ್ತರ ಅಶ್ಲೀಲ ವಿಡಿಯೋ ರೆಕಾರ್ಡ್: ನಕಲಿ ದೇವಮಾನವ ಅರೆಸ್ಟ್!

ಸ್ವಾಮೀಜಿಗಳು ಎಂದರೆ ಇತ್ತೀಚೆಗೆ ಯಾಕೋ ಅವರು ಮಾಡುವ ಕೆಲಸ ಬಿಟ್ಟು ಮಾಡಬಾರದ ಕೆಲಸಗಳಿಗೆ ಹೆಸರುವಾಸಿ ಆಗುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸ್ವಯಂ ಘೋಷಿತ ಸ್ವಾಮೀಜಿಗಳು ಜೈಲು ಕಂಬಿ ಎಣಿಸುತ್ತಿದ್ದರೂ ಸಹ ಇತರೆ ಕೆಲವು ಸ್ವಾಮೀಜಿಗಳು ಇದರಿಂದ ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ.

ಇಲ್ಲೋರ್ವ ಸ್ವಾಮೀಜಿ ವಿಭಿನ್ನ ರೀತಿಯಲ್ಲಿ ಜನರಿಗೆ ತೊಂದರೆ ನೀಡಿದ್ದಾನೆ.
ಹೌದು, ಟೆಕ್ನಾಲಜಿ ಬಳಕೆ ಮಾಡಿಕೊಂಡು ಈ ನಕಲಿ ದೇವಮಾನವ ಅಥವಾ ಸ್ವಾಮೀಜಿ (Fake Godman) ಮಾಡಬಾರದ ಕೆಲಸ ಮಾಡಿ ಈಗ ಪೊಲೀಸರ ಅತಿಥಿ ಆಗಿದ್ದಾನೆ. ಈತನ ಮೇಲಿನ ದಾಳಿಯ ಸಮಯದಲ್ಲಿ ಆರೋಪಿಯ ಫೋನ್‌ನಲ್ಲಿ ಆಕ್ಷೇಪಾರ್ಹ ವೀಡಿಯೊಗಳು ಇರುವುದು ಪೊಲೀಸರಿಗೆ ಕಂಡುಬಂದಿದೆ. ಪುಣೆಯಲ್ಲಿ ದೇವಮಾನವನಂತೆ ನಟಿಸುತ್ತಿದ್ದ ಈತ ಸ್ಪೈ ಆಯಪ್ ಮೂಲಕ ಭಕ್ತರನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ಅಶ್ಲೀಲ ಕೃತ್ಯಗಳನ್ನು ಮಾಡುವಂತೆ ಒತ್ತಾಯಿಸಿ, ಬೆದರಿಕೆ ಹಾಕುತ್ತಿದ್ದನಂತೆ.

ಘಟನೆ ವಿವರ
ಪ್ರಸಾದ್ ಅಲಿಯಾಸ್ ದಾದಾ ಭೀಮರಾವ್ ತಾಮ್ದಾರ್ ಎಂದು ಗುರುತಿಸಲಾದ ಆರೋಪಿಯು ತನ್ನ ಮೊಬೈಲ್ ಫೋನ್‌ನಲ್ಲಿ ಸ್ಪೈ ಆಪ್ (Spy app on mobile phone) ಅನ್ನು ಇನ್‌ಸ್ಟಾಲ್ ಮಾಡಿದ್ದಾನೆ ಎಂದು ಆರೋಪಿಸಿ 39 ವರ್ಷದ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಭಕ್ತರ ಖಾಸಗಿ ಡೇಟಾ ಮತ್ತು ವೈಯಕ್ತಿಕ ಜೀವನವನ್ನು ದೂರದಿಂದಲೇ ಪ್ರವೇಶಿಸಲು ಈ ಸ್ಪೈ ಆಯಪ್ ಅನ್ನು ಬಳಕೆ ಮಾಡುತಿದ್ದ ಎಂದು ದೂರುದಾರರು ತಿಳಿಸಿದ್ದಾರೆ.
ಆರೋಪಿಯು ದೈವಿಕ ಶಕ್ತಿಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ ಮತ್ತು ಅಲ್ಲದೆ ಭಕ್ತರ ಚಟುವಟಿಕೆಗಳನ್ನು ಈ ಆಪ್ ಮೂಲಕ ಗಮನಿಸಿ ನಂತರ ಅವರಿಗೆ ಎಲ್ಲಾ ಗೊತ್ತಿರುವ ರೀತಿಯಲ್ಲಿ ದೇವ ಮಾನವಂತೆ ನಟನೆ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಆರೋಪಿಯು ಹಲವಾರು ಭಕ್ತರ ಚಲನವಲನಗಳು, ಸಂಭಾಷಣೆಗಳು ಮತ್ತು ಕ್ರಿಯೆಗಳನ್ನು ದಾಖಲಿಸಲು ಏರ್ ಡ್ರಾಯಿಡ್ ಕಿಡ್ ಎಂಬ ಆಪ್ ಅನ್ನು ಬಳಕೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಹಸ್ಯ ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಶುದ್ಧೀಕರಣವನ್ನು ನಡೆಸುವ ನೆಪದಲ್ಲಿ ಅವನು ಅನುಯಾಯಿಗಳನ್ನು ಆಹ್ವಾನಿಸುತ್ತಿದ್ದನಂತೆ.
ಕೆಲವು ಭಕ್ತರು ತಮ್ಮ ಫೋನ್ ಸೆಟ್ಟಿಂಗ್‌ಗಳಲ್ಲಿ ಅಕ್ರಮಗಳು ಮತ್ತು ನಕಲಿ ದೇವಮಾನವನ ನಡವಳಿಕೆಯನ್ನು ಗಮನಿಸಿದಾಗ ಅನುಮಾನ ಹುಟ್ಟಿಕೊಂಡಿದೆ. ದಾಳಿಯ ಸಮಯದಲ್ಲಿ, ಪೊಲೀಸರು ಆರೋಪಿಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಆಕ್ಷೇಪಾರ್ಹ ವಿಷಯ ಮತ್ತು ಅನುಯಾಯಿಗಳ ಅರಿವಿಲ್ಲದೆ ರೆಕಾರ್ಡ್ ಮಾಡಲಾದ ಬಹು ವಿಡಿಯೋ ತುಣುಕುಗಳಿವೆ.
ಪುಣೆಯ ಬವ್ಧಾನ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ವಿಭೂತೆ, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 318(4) (ವಂಚನೆ) ಮತ್ತು 75(1) (ಲೈಂಗಿಕ ಕಿರುಕುಳ) ಮತ್ತು ಮಹಾರಾಷ್ಟ್ರ ಮೂಢನಂಬಿಕೆ ವಿರೋಧಿ ಮತ್ತು ಮಾಟಮಂತ್ರ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
