ಅಸ್ಸಾಂನಲ್ಲಿ ನಕಲಿ ಡಾಕ್ಟರ್ ಬಂಧನ: ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಯಲ್ಲಿ ಪರಿಣತ

ಗುವಾಹಟಿ: ಅಸ್ಸಾಂನಲ್ಲಿ ಸಿಲ್ಚಾರ್ ನಲ್ಲಿ ಗರ್ಭಿಣಿಯವರಿಗೆ ಸಿಸೇರಿಯನ್ (ಸಿ-ಸೆಕ್ಷನ್) ಮೂಲಕ ಹೆರಿಗೆ ಮಾಡಿಸಿ ಹೆಸರುವಾಸಿಯಾಗಿದ್ದ ಡಾ. ಪುಲೋಕ್ ಮಲಾಕರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಅಚಾತುರ್ಯದಿಂದ ಯಾರಿಗಾದರೂ ಪ್ರಾಣಹಾನಿಯಾಯ್ತಾ, ಏನು ಎತ್ತ?

ಯಾಕೆ ಇವರನ್ನು ಬಂಧಿಸಲಾಯಿತು ಎಂದು ಕೇಳಿದರೆ ಅದಕ್ಕೆ ಉತ್ತರ.. ಅಸಲಿಗೆ ಇವರು ಡಾಕ್ಟ್ರೇ ಅಲ್ಲ!
ಹೌದು, ಈತ ಹೊಂದಿದ್ದ ಎಲ್ಲಾ ವಿದ್ಯಾರ್ಹತೆ ಪ್ರಮಾಣಪತ್ರಗಳು ನಕಲಿ. ಆದರೂ, ಅದೆಲ್ಲಿಂದ ಕಲಿತಿದ್ದನೋ ಏನೋ… ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಗಳನ್ನು ನಿಖರವಾಗಿ ಮಾಡುತ್ತಿದ್ದ. ಸುತ್ತಮುತ್ತಲಿನ ಜನರಿಗೆ ಈತನ ವಿರುದ್ಧ ಯಾವ ಕಂಪ್ಲೇಂಟ್ ಕೂಡ ಇರಲಿಲ್ಲ. ಅಷ್ಟೇ ಅಲ್ಲ, ಈತನ ಹಸ್ತಗುಣದಿಂದ ಅನೇಕ ಮಂದಿಯು ಸುಲಭವಾಗಿ ಹೆರಿಗೆ ಮಾಡಿಸಿಕೊಂಡು ಈಗಲೂ ಆರೋಗ್ಯವಾಗಿದ್ದಾರೆ. ಆದರೂ, ನಕಲಿ ಪ್ರಮಾಣಪತ್ರಗಳನ್ನು ಹೊಂದಿರುವ ಕಾರಣಕ್ಕಾಗಿ ಈತನನ್ನು ಅರೆಸ್ಟ್ ಮಾಡಲಾಗಿದೆ.
ಈತ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಯಾವುದಾದರೂ ಸಿಸೇರಿಯನ್ ಆಪರೇಷನ್ ಇದ್ದಾಗ ಈತನಿಗೆ ಆಸ್ಪತ್ರೆಗಳವರು ಫೋನಾಯಿಸುತ್ತಿದ್ದರು. ಆಗ ಬಂದು ಈತ ಕೇಸ್ ಅಟೆಂಡ್ ಮಾಡಿ ಹೋಗುತ್ತಿದ್ದ. ಮೊನ್ನೆಯೂ ಈತ ಯಾವುದೋ ಒಬ್ಬ ಗರ್ಭಿಣಿಗೆ ಆಸ್ಪತ್ರೆಯೊಂದರಲ್ಲಿ ಸಿ- ಸೆಕ್ಷನ್ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾಗಲೇ ನೇರವಾಗಿ ಅಲ್ಲಿಗೆ ಧಾವಿಸಿದ ಪೊಲೀಸರು ಆತನನ್ನು ಅಲ್ಲಿಂದ ಬಂಧಿಸಿ ಕರೆದೊಯ್ದಿದ್ದಾರೆ.
ಇದೇ ಜನವರಿಯಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಅಸ್ಸಾಂನಲ್ಲಿರುವ ನಕಲಿ ವೈದ್ಯರನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಪಡೆಯನ್ನು ರೂಪಿಸಿದ್ದರು. ಅಸ್ಸಾಂ ಪೊಲೀಸ್ ಇಲಾಖೆಯ ಜೊತೆಯಲ್ಲಿ ಕಾರ್ಯನಿರ್ವಹಿಸುವ ಆ ಕಾರ್ಯಪಡೆಯು ಇದುವರೆಗೆ ಸುಮಾರು 10 ನಕಲಿ ವೈದ್ಯರನ್ನು ಆ ನಿಯೋಗ ಪತ್ತೆ ಹಚ್ಚಿದೆ. ಅವರಲ್ಲೊಬ್ಬ ಸಿಲ್ಚಾರ್ ನ ಈ ಪುಲೋಕ್ ಮಲಾಕರ್ ಎಂದು ಹೇಳಲಾಗಿದೆ.
