ಬ್ಯಾಂಕ್ ಸಾಲ ಮನ್ನಾ ಮಾಡಿಸಲು ನಕಲಿ ಸಾವಿನ ಕಥೆ: ತನಿಖೆಯ ವೇಳೆ ಬಯಲಾದ ಬಿಜೆಪಿ ಮುಖಂಡನ ಪುತ್ರನ ಮೋಸದ ಕಥೆ

ಇಂದೋರ್(ಮಧ್ಯಪ್ರದೇಶ): ಬರೋಬ್ಬರಿ 1.40 ಕೋಟಿ ರೂ. ಬ್ಯಾಂಕ್ ಸಾಲದ ಮರುಪಾವತಿಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಮುಖಂಡ ಮಹೇಶ್ ಸೋನಿ ಪುತ್ರ ವಿಶಾಲ್ ಸೋನಿ ನಕಲಿ ಸಾವಿನ ಕಥೆ ಕಟ್ಟಿ ಸಿಕ್ಕಿಬಿದ್ದಿರುವ ಘಟನೆ ಮಧ್ಯಪ್ರದೇಶದ ರಾಜ್ ಗಢ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಈ ಘಟನೆ ಮೊದಲು ವರದಿಯಾಗಿದ್ದು ಸೆಪ್ಟೆಂಬರ್ 5ರಂದು. ಗೋಪಾಲ್ ಪುರ ಸಮೀಪದ ಕಾಳಿಸಿಂಧ್ ನದಿಯಲ್ಲಿ ಕಾರೊಂದು ಮುಳುಗಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು. ನಂತರ ಪೊಲೀಸರು ಮುಳುಗು ತಜ್ಞರನ್ನು ಕರೆಯಿಸಿ ಕಾರನ್ನು ಮೇಲಕ್ಕೆತ್ತಿದ್ದರು. ಬಳಿಕ ಇದು ವಿಶಾಲ್ ಸೋನಿ ಕಾರು ಎಂದು ಪತ್ತೆ ಹಚ್ಚಿದ್ದರು. ಆದರೆ ಕಾರಿನೊಳಗೆ ಯಾವ ವ್ಯಕ್ತಿಯ ಕುರುಹು ಇಲ್ಲವಾಗಿತ್ತು.
ಕೊನೆಗೂ ಪೊಲೀಸರು ರಾಜ್ಯದ ವಿಪತ್ತು ನಿರ್ವಹಣಾ ಪಡೆಯ ನೆರವಿನೊಂದಿಗೆ ಸುಮಾರು 20 ಕಿಲೋ ಮೀಟರ್ ಉದ್ದದ ನದಿಯಲ್ಲಿ ತೀವ್ರ ಶೋಧ ಕಾರ್ಯ ನಡೆಸಿದ್ದರೂ ಏನೂ ಪ್ರಯೋಜನವಾಗಿರಲಿಲ್ಲವಾಗಿತ್ತು. ಬಳಿಕ ಪೊಲೀಸರು ಸೋನಿಯ ಮೊಬೈಲ್ ಕರೆಗಳ ದಾಖಲೆ ಪರಿಶೀಲಿಸಿದಾಗ ಆತ ಮಹಾರಾಷ್ಟ್ರದಲ್ಲಿ ಇದ್ದಿರುವುದು ಬಯಲಾಗಿತ್ತು.
ಈ ಮಾಹಿತಿ ಮೇರೆಗೆ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಸೋನಿಯನ್ನು ಸಂಭಾಜಿನಗರ್ ಜಿಲ್ಲೆಯ ಫರ್ದಾಪುರ್ ಎಂಬಲ್ಲಿ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡ ಸೋನಿ:
ಪೊಲೀಸರ ತನಿಖೆಯ ವೇಳೆ ವಿಶಾಲ್, ತಾನು ಆರು ಲಾರಿ ಹಾಗೂ ಎರಡು ಬಸ್ ಗಳ ಮಾಲೀಕನಾಗಿದ್ದೇನೆ. ಆದರೆ 1.40 ಕೋಟಿ ರೂಪಾಯಿ ಬ್ಯಾಂಕ್ ಸಾಲ ಮರುಪಾವತಿಸಲು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ತಾನು ಸಾವನ್ನಪ್ಪಿದಂತೆ ನಾಟಕವಾಡಿದರೆ ಸಾಲ ಮನ್ನಾ ಆಗುತ್ತದೆ ಎಂಬುದಾಗಿ ಸಲಹೆ ನೀಡಿದ್ದರು. ಈ ಉಪಾಯದಂತೆ ಸೆಪ್ಟೆಂಬರ್ 5ರಂದು ಕಾರನ್ನು ನದಿಗೆ ತಳ್ಳಿ, ಕಾರಿನ ಚಾಲಕನ ಮೋಟಾರ್ ಬೈಕ್ ನಲ್ಲಿ ಇಂದೋರ್ ನಿಂದ ಶಿರ್ಡಿಗೆ ಆಗಮಿಸಿರುವುದಾಗಿ ತಿಳಿಸಿದ್ದಾನೆ.
ನಕಲಿ ಸಾವಿಗೆ ಕಾನೂನಿನಲ್ಲಿ ಶಿಕ್ಷೆ ಇಲ್ಲ!
ಯಾರೋ ಒಬ್ಬರು ತಮ್ಮದೇ ನಕಲಿ ಸಾವಿನ ನಾಟಕವಾಡಿದರೆ ಅವರನ್ನು ಶಿಕ್ಷಿಸಲು ಸಾಂವಿಧಾನಿಕವಾಗಿ ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ವಿಶಾಲ್ ಸೋನಿ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೇ ಆತನನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿ ವಿವರಿಸಿದೆ.