ಬೆಂಗಳೂರಲ್ಲಿ ‘ನಕಲಿ’ ಜಾತಿ ಸಮೀಕ್ಷೆ ಆರೋಪ: ಮಾಹಿತಿ ಪಡೆಯದೆ ಮನೆ ಗೋಡೆಗೆ ‘ಸರ್ವೆ ಪೂರ್ಣ’ ಸ್ಟಿಕ್ಕರ್ – ಅನುಮಾನ ಮೂಡಿಸಿದ ಸರ್ಕಾರದ ಕ್ರಮ!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡ ಜಾತಿ ಸಮೀಕ್ಷೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ಅವೈಜ್ಞಾನಿಕ ಸಮೀಕ್ಷೆ ಎಂದು ಆಡಳಿತ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದಿತ್ತು. ಇದೀಗ ಮತ್ತೆ ಇಂತಹದ್ದೇ ಸ್ಥಿತಿಗೆ ಸರ್ಕಾರ ಮುಂದಾಗುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ, ನಗರದ ಹಲವೆಡೆ ಸಮೀಕ್ಷೆ ಮಾಡದೆಯೇ ಸಮೀಕ್ಷೆ ಮಾಡಿರುವುದಾಗಿ ಮನೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲಾಗುತ್ತಿರುವ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಟಿವಿ9 ಡಿಜಿಟಲ್ಗೆ ಜನರೇ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಕೆಲ ನಗರಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸರ್ವೆ ಮಾಡಲಾಗುತ್ತಿದೆ. ಮನೆಯಲ್ಲಿ ಜನರು ಇದ್ದರೂ ಯಾವುದೇ ಮಾಹಿತಿ ಪಡೆಯದೇ ಅಧಿಕಾರಿಗಳು ಕೇವಲ ಸ್ಟಿಕ್ಕರ್ ಅಂಟಿಸಿ ತೆರಳುತ್ತಿದ್ದಾರೆ ಎಂದು ಜನರು ದೂರಿದ್ದಾರೆ
ಗುರುವಾರ ಮತ್ತು ಶುಕ್ರವಾರದಂದು ಶ್ರೀನಗರದ ಬಿಎಸ್ಕೆ ಮೊದಲ ಹಂತದ ಮನೆಗಳಿಗೆ ಭೇಟಿ ನೀಡಿದ್ದ ಅಧಿಕಾರಿಗಳು ಸರ್ವೆ ಕುರಿತ ಯಾವುದೇ ಮಾಹಿತಿ ಪಡೆದಿಲ್ಲ. ಬದಲಿಗೆ ‘ಈ ಮನೆಯ ಸಮೀಕ್ಷೆ ಪೂರ್ಣಗೊಳಿಸಲಾಗಿದೆ’ ಎಂದು ಸ್ಟಿಕ್ಕರ್ ಅಂಟಿಸಿದ್ದಾರೆ. ಇದು ಕೇವಲ ಒಂದು ಮನೆಗೆ ಅಲ್ಲಾ ಇಡೀ ನಗರದ ಮನೆಗಳಿಗೆಲ್ಲಾ ಅಧಿಕಾರಿಗಳು ಸ್ಟಿಕ್ಕರ್ ಮಾತ್ರ ಅಂಟಿಸಿರುವುದಾಗಿ ಗೊತ್ತಾಗಿದೆ.

ಸ್ಥಳೀಯರು ಹೇಳಿದ್ದಿಷ್ಟು
ಈ ಬಗ್ಗೆ ಟಿವಿ9 ಡಿಜಿಟಲ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದು, ‘ನಾನು ತರಕಾರಿ ತೆಗೆದುಕೊಳ್ಳುವುದಕ್ಕೆ ಹೊರಗಡೆ ಹೋಗಿದೆ. ಆದರೆ ಮನೆಯಲ್ಲಿ ನನ್ನ ತಾಯಿ ಇದ್ದರು. ಅವರ ಬಳಿ ಯಾವುದೇ ಮಾಹಿತಿ ಪಡೆದಿಲ್ಲ. ನಾನು ವಾಪಸ್ ಮನೆಗೆ ಬಂದಾಗ ಮನೆಯ ಗೋಡೆಗೆ ಸ್ಟಿಕ್ಕರ್ ಅಂಟಿಸಲಾಗಿತ್ತು’ ಎಂದು ಹೇಳಿದ್ದಾರೆ.
‘ಅದೇ ನಗರದಲ್ಲಿದ್ದ ಅಧಿಕಾರಿಗಳನ್ನು ಕೇಳಿದಾಗ ಮತ್ತೊಮ್ಮೆ ಬರುವುದಾಗಿ ಹೇಳಿದ್ದಾರೆ. ಇನ್ನು ಈ ಕುರಿತಾಗಿ ಅಕ್ಕ ಪಕ್ಕದ ಮನೆಗಳಲ್ಲಿ ವಿಚಾರಿಸಿದಾಗ ಯಾವುದೇ ಸಮೀಕ್ಷೆ ನಡೆದಿಲ್ಲ. ಬದಲಿಗೆ ಇಡೀ ನಗರದಲ್ಲಿ ಮನೆ ಮನೆಗಳಿಗೆ ಸ್ಟಿಕ್ಕರ್ ಮಾತ್ರ ಅಂಟಿಸಿರುವುದು ಗೊತ್ತಾಗಿದೆ’ ಎಂದು ಅವರು ಹೇಳಿದ್ದಾರೆ.
ಇದೇ ರೀತಿಯಾಗಿ ಕುಮಾರಸ್ವಾಮಿ ಲೇಔಟ್, ಬನಶಂಕರಿಯ ಇಸ್ರೋ ಲೇಔಟ್, ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ ಮತ್ತು ವಿಠಲ್ ನಗರ ಸೇರಿದಂತೆ ಹಲವೆಡೆ ಅಧಿಕಾರಿಗಳು ಮನೆ ಮನೆಗೆ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ ಹೊರತು ಸರಿಯಾದ ಮಾಹಿತಿ ಪಡೆಯುತ್ತಿಲ್ಲವೆಂದು ದೂರುಗಳು ಕೇಳಿಬರುತ್ತಿವೆ.
