QR ಕೋಡ್ ಮುಖಪರಿಚಯ ತಂತ್ರಜ್ಞಾನದಿಂದ CET ನಲ್ಲಿ ನಕಲಿ ಅಭ್ಯರ್ಥಿ ಪತ್ತೆ

ಬೆಂಗಳೂರು: ಕೊನೇ ಕ್ಷಣದಲ್ಲಿ ಬಂದು ಸಿಇಟಿ ಪರೀಕ್ಷೆ ಬರೆಯಲು ಪ್ರಯತ್ನಿಸಿದ ಅಭ್ಯರ್ಥಿಯೊಬ್ಬರು ನಕಲಿ ಎಂಬುದನ್ನು ಕ್ಯೂಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆಹಚ್ಚುವ ಆಯಪ್ನಲ್ಲಿ ಸಿಲುಕಿ ಬಿದ್ದಿದ್ದು ಈ ಕುರಿತು ತನಿಖೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆದೇಶಿಸಿದೆ.

ಮಲ್ಲೇಶ್ವರದ 7ನೇ ಅಡ್ಡರಸ್ತೆಯಲ್ಲಿರುವ ಸಿಲ್ವರ್ ವ್ಯಾಲಿ ಪಬ್ಲಿಕ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ತುಬಾ ಫಾತೀಮಾ ಜಮೀಲ್ ಎಂಬಾಕೆ ಗಣಿತ ವಿಷಯ ಬರೆಯಲು ಬಂದವರು ನೇರವಾಗಿ ಶೌಚ ಗೃಹಕ್ಕೆ ಹೋಗಿ ಗಂಟೆಯಾದರೂ ಹೊರ ಬಂದಿರಲಿಲ್ಲ. ಇನ್ನೇನು ಪರೀಕ್ಷೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಹೊರ ಬಂದು ಕ್ಯೂಆರ್ ಕೋಡ್ ಇರುವ ಪ್ರವೇಶ ಪತ್ರ ತೋರಿಸಿ, ಒಳ ಹೋಗಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಮುಖ ಚಹರೆ ಪತ್ತೆ ಆಯಪ್ ಮೂಲಕ ಅವರ ಭಾವಚಿತ್ರ ತೆಗೆದಾಗ ಅವರು ನಕಲಿ ಎಂಬುದು ಗೊತ್ತಾಗಿದೆ. ತಕ್ಷಣ ಈ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ತರಬೇಕೆನ್ನುವಷ್ಟರಲ್ಲಿ ಅಲ್ಲಿಂದ ಅವರು ಕಾಲ್ಕಿತ್ತಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಇವರು ಟಬು ನಾಝ್ ಎಂಬ ನೈಜ ಅಭ್ಯರ್ಥಿಯ ಪ್ರವೇಶ ಪತ್ರಕ್ಕೆ ತನ್ನ ಚಿತ್ರ ಅಂಟಿಸಿಕೊಂಡಿದ್ದರು. ಅಲ್ಲದೆ, ಪರೀಕ್ಷಾ ದಿನಾಂಕಗಳನ್ನೂ ತಪ್ಪಾಗಿ ನಮೂದಿಸಿದ್ದರು ಎಂಬುದು ಗೊತ್ತಾಗಿದೆ. ಈ ಬಗ್ಗೆ ವಿಡಿಯೊ ದೃಶ್ಯ ಸಮೇತ ವರದಿ ನೀಡಲು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಅಭ್ಯರ್ಥಿಗಳನ್ನು ತಪಾಸಣೆ ಮಾಡಿದ ಇಡಿ, ಎಒ
ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮತ್ತು ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಗುರುವಾರ ಭೇಟಿ ನೀಡಿ ಅಭ್ಯರ್ಥಿಗಳನ್ನು ಕ್ಯೂಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆ ಆಯಪ್ ಮೂಲಕ ತಪಾಸಣೆ ಮಾಡಿದರು.
ಕೆಇಎ ಅಭಿವೃದ್ಧಿಪಡಿಸಿರುವ ಆೃಪ್ ಅನ್ನು ಸ್ವತಃ ಇಬ್ಬರೂ ಅಧಿಕಾರಿಗಳು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳ ಭಾವಚಿತ್ರ ತೆಗೆದು ನೈಜತೆ ಪರಿಶೀಲಿಸಿದರು.
2ನೇ ದಿನದ ಸಿಇಟಿ: ಶೇ.92.93 ವಿದ್ಯಾರ್ಥಿಗಳು ಹಾಜರ್
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದ ಎರಡೂ ದಿನಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶೇ 92.93ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ.
ಒಟ್ಟು 3,30,808 ಅಭ್ಯರ್ಥಿಗಳ ಪೈಕಿ ಗುರುವಾರ ನಡೆದ ಗಣಿತ ಪರೀಕ್ಷೆಯನ್ನು 3,04,186 (ಶೇ 91.95) ಹಾಗೂ ಜೀವಶಾಸ 2,63,867 ಅಭ್ಯರ್ಥಿಗಳ ಪೈಕಿ 2,39,848 (ಶೇ 90.90) ಮಂದಿ ಬರೆದಿದ್ದಾರೆ. ಬುಧವಾರ ನಡೆದಿದ್ದ ಭೌತಶಾಸಕ್ಕೆ 3,11,690 (ಶೇ 94.22) ಹಾಗೂ ರಾಸಾಯನಶಾಸಕ್ಕೆ 3,11,690 (ಶೇ 94.25) ಮಂದಿ ಬರೆದಿದ್ದರು.