ನಕಲಿ “ಬ್ರಿಟಿಷ್” ವೈದ್ಯನಾಗಿ ಭಾರತೀಯನಿಂದ ಶಸ್ತ್ರ ಚಿಕಿತ್ಸೆ-ಏಳು ಮಂದಿ ಸಾವು.

ಮಧ್ಯಪ್ರದೇಶ : ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಖಾಸಗಿ ಮಿಷನರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ಕಾರ್ಡಿಯಾಲಜಿಸ್ಟ್ ಎಂದು ನಾಟಕವಾಡಿದ ವ್ಯಕ್ತಿಯೊಬ್ಬ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಕನಿಷ್ಠ ಏಳು ರೋಗಿಗಳ ಸಾವಿಗೆ ಕಾರಣನಾದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯು ನಿಜವಾಗಿ ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂದು ಗುರುತಿಸಲ್ಪಟ್ಟಿದ್ದು, ಡಾ. ಎನ್ ಜಾನ್ ಕೆಮ್ ಎಂಬ ಪ್ರಸಿದ್ಧ ಬ್ರಿಟಿಷ್ ವೈದ್ಯರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಬಳಸಿ ಕೆಲಸಕ್ಕೆ ಸೇರಿದ್ದಾನೆ.
ಈ ಪ್ರಕರಣದ ಬಗ್ಗೆ ದಮೋಹ್ ಜಿಲ್ಲಾ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಆಸ್ಪತ್ರೆಯಿಂದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ದಮೋಹ್ ಬಾಲ್ಯ ಕಲ್ಯಾಣ ಸಮಿತಿಯ ಅಧ್ಯಕ್ಷ ದೀಪಕ್ ತಿವಾರಿ ಅವರು ಈ ಬಗ್ಗೆ ದೂರು ನೀಡಿದ್ದು, ಸಾವಿನ ಸಂಖ್ಯೆ ಅಧಿಕವಾಗಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕಲೆಕ್ಟರ್ ಸುಧೀರ್ ಕೊಚರ್ ಮತ್ತು ಎಸ್‌ಪಿ ಅಭಿಷೇಕ್ ತಿವಾರಿ ಅವರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.