Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ಯುವತಿಯಿಂದ 40 ಲಕ್ಷ ರೂ. ಹಾಗೂ 2 ಕೆಜಿ ಚಿನ್ನ ಸುಲಿಗೆ

Spread the love

ಬೆಂಗಳೂರ: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರಿಗೆ ಪರಿಚಯವಾಗಿ, ಅವರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಬರೋಬ್ಬರಿ 2 ಕೆಜಿ ಚಿನ್ನ ಹಾಗೂ 40 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೆ.ಆರ್. ಪುರಂ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಚೆನ್ನೂರು ಮಹೇಶ್ ಮತ್ತು ವನ್ನೂರು ಸ್ವಾಮಿ ಬಂಧಿತ ಆರೋಪಿಗಳು. ಬಂಧಿತರಿಂದ ಪ್ರಸ್ತುತ 571 ಗ್ರಾಂ ಚಿನ್ನಾಭರಣ ಹಾಗೂ 25 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸುಮಾರು ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್‌ಚಾಟ್ (Snapchat) ಮೂಲಕ ಸಂತ್ರಸ್ತ ಮಹಿಳೆಗೆ ಚೆನ್ನೂರು ಮಹೇಶ್ ಪರಿಚಯವಾಗಿದ್ದ. ಮಾತು ಮುಂದುವರಿಸಿದ ಈತ ಮೆಲ್ಲಗೆ ಮಹಿಳೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ. ನಂತರ ವಾಟ್ಸಾಪ್ ವಿಡಿಯೋ ಕರೆ ಮಾಡುವ ಸಂದರ್ಭದಲ್ಲಿ ಮಹಿಳೆಗೆ ತಿಳಿಯದಂತೆ ಸ್ಕ್ರೀನ್ ರೆಕಾರ್ಡಿಂಗ್ ಮೂಲಕ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದ. ಇದನ್ನೇ ಅಸ್ತ್ರವಾಗಿಸಿಕೊಂಡ ಕಿರಾತಕರು, “ನಿಮ್ಮ ಖಾಸಗಿ ಫೋಟೋಗಳನ್ನು ಪತಿಗೆ ಕಳುಹಿಸುತ್ತೇವೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇವೆ” ಎಂದು ಬೆದರಿಕೆ ಹಾಕಲು ಆರಂಭಿಸಿದ್ದರು.

ಮಾನಹಾನಿಗೆ ಹೆದರಿದ ಮಹಿಳೆ, ಆರೋಪಿಗಳ ಬೇಡಿಕೆಯಂತೆ ಕಳೆದ ಒಂದೂವರೆ ವರ್ಷದಲ್ಲಿ ಹಂತಹಂತವಾಗಿ ಒಟ್ಟು 40 ಲಕ್ಷ ರೂ. ನಗದು ಹಾಗೂ 2 ಕೆಜಿ ಚಿನ್ನಾಭರಣವನ್ನು ನೀಡಿದ್ದರು. ಇಷ್ಟಾದರೂ ಆರೋಪಿಗಳ ಕಾಟ ನಿಲ್ಲದಿದ್ದಾಗ, ಸಂತ್ರಸ್ತೆಯು ಅಂತಿಮವಾಗಿ ಪತಿಗೆ ವಿಷಯ ತಿಳಿಸಿದ್ದರು. ಈ ಕುರಿತು ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ನೀಡಿದ್ದಾರೆ. ಮಹಿಳೆಯಿಂದ ಸುಲಿಗೆ ಮಾಡಿದ ಹಣವನ್ನು ಇಬ್ಬರೂ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹೂಡಿಕೆ ಮಾಡಿ ಭಾರಿ ಮೊತ್ತವನ್ನು ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ವನ್ನೂರು ಸ್ವಾಮಿಗೆ ಈ ಮಹಿಳೆಯ ಪರಿಚಯವಾಗಿದ್ದೇ ಮಹೇಶ್ ಮೂಲಕ ಎನ್ನುವುದು ತನಿಖೆಯಲ್ಲಿ ದೃಢಪಟ್ಟಿದೆ.

ಬಂಧಿತರ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿದ ಪೊಲೀಸರಿಗೆ ಆಘಾತ ಕಾದಿತ್ತು. ಕೇವಲ ಈ ಮಹಿಳೆ ಮಾತ್ರವಲ್ಲದೆ, ಇನ್ನೂ ಅನೇಕ ಯುವತಿಯರ ಮತ್ತು ಮಹಿಳೆಯರ ಖಾಸಗಿ ಫೋಟೋಗಳು ಅವರ ಫೋನ್‌ನಲ್ಲಿ ಪತ್ತೆಯಾಗಿವೆ. ಇವರು ಇದೇ ರೀತಿ ಹತ್ತಾರು ಜನರಿಗೆ ಬ್ಲ್ಯಾಕ್‌ಮೇಲ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಈ ಮೂಲಕ ಮನವಿ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *